ಜಾಗತಿಕವಾಗಿ ಹವಾಮಾನ ವೈಪರೀತ್ಯಗಳು ಕಂಡು ಬರುತ್ತಿವೆ. ಅಮೆರಿಕ ಮತ್ತು ಯುರೋಪ್ನಲ್ಲಿ ಶಾಖದ ಅಲೆ ಹೆಚ್ಚುತ್ತಿವೆ. ದಕ್ಷಿಣ ಏಷ್ಯಾದಲ್ಲಿ ಜನರು ಪ್ರವಾಹದಿಂದ ತತ್ತರಿಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸ್ಪೇನ್, ಇಟಲಿ ಮತ್ತು ಗ್ರೀಸ್ ದೇಶಗಳಲ್ಲಿ ಕೆಲವು ದಿನಗಳಿಂದ ಜನರು ಅತಿಯಾದ ಉಷ್ಣಾಂಶದಿಂದ ಹೈರಾಣಾಗಿದ್ದಾರೆ. ರೋಮ್, ಬೊಲೊಗ್ನಾ, ಫ್ಲೋರೆನ್ಸ್ ಸೇರಿದಂತೆ 16 ನಗರದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಇಟಲಿ ಆರೋಗ್ಯ ಸಚಿವರು ಕಳೆದ ವಾರ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಬಿರು ಬಿಸಿಲಿನ ಶಾಖ ಮುಂದಿನ ವಾರವೂ ಮುಂದುವರೆಯಲಿದ್ದು, ಸರ್ಡಿನಿಯಾದಲ್ಲಿ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಇಟಲಿ ಮಾಧ್ಯಮ ತಿಳಿಸಿದೆ.
ಈ ತಾಪಮಾನ ಜುಲೈ 19 ಮತ್ತು 23ರಂದು ಮತ್ತಷ್ಟು ಹೆಚ್ಚಲಿದೆ. ಇಟಲಿ ಮಾತ್ರವಲ್ಲ ಗ್ರೀಸ್, ಟರ್ಕಿ, ಬ್ಲಲ್ಕಾನ್ಸ್ ಜನರು ನೆತ್ತಿ ಸುಡುವ ಬಿಲಿಸಿನಿಂದ ಬಳಲುತ್ತಿದ್ದಾರೆ. ಮುಂದಿನ ವಾರಗಳಲ್ಲಿ ಅನೇಕ ಸ್ಥಳೀಯ ಪ್ರದೇಶಗಳಲ್ಲಿ ಶಾಖದ ಪ್ರಮಾಣ ಏರಿಕೆಯಾಗಲಿದೆ ಎಂದು ಇಟಲಿಯನ್ ಹವಾಮಾನ ಮತ್ತು ಪರಿಸರ ತಜ್ಞರು ಎಚ್ಚರಿಸಿದ್ದಾರೆ.
ಜುಲೈ ತಿಂಗಳ ಆರಂಭದಿಂದ ಭೂಮಿ ಅತಿ ಉಷ್ಣಾಂಶಕ್ಕೆ ಒಳಗಾಗಿದ್ದು, ಜಾಗತಿಕ ತಾಪಮಾನ ಏರಿಕೆ ಕಂಡಿದೆ. ಜೂನ್ನಲ್ಲಿ ಕೂಡ ಅಧಿಕ ಶಾಖದ ಅಲೆ ದಾಖಲಾಗಿದೆ. ವಿಶ್ವ ಹವಾಮಾನ ಕೇಂದ್ರದನುಸಾರ, ಇದು ಹವಾಮಾನ ಬದಲಾವಣೆ ಮತ್ತು ಎಲ್ ನಿನೊ ಹವಾಮಾನ ಮಾದರಿಯ ಆರಂಭಿಕ ಹಂತಗಳ ಮುನ್ಸೂಚನೆ. ವಿಶ್ವಸಂಸ್ಥೆ ಹೇಳುವಂತೆ ಶೇ 90ರಷ್ಟು ಎಲ್ ನಿನೊ ಘಟನೆಗಳು 2023ರ ದ್ವಿತೀಯಾರ್ಧದಲ್ಲೂ ಮುಂದುವರೆಯಲಿದೆ.