ಕರ್ನಾಟಕ

karnataka

ETV Bharat / international

ನೆರೆ ದೇಶ ಬಾಂಗ್ಲಾದಲ್ಲಿ ಡೆಂಗ್ಯೂ ಜ್ವರ ಉಲ್ಬಣ: ಲಕ್ಷಣಗಳೇನು? ರಕ್ಷಣೆ ಹೇಗೆ? ಸಂಪೂರ್ಣ ಮಾಹಿತಿ.. - Bangladesh dengue fever case

ಬಾಂಗ್ಲಾದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದೊಂದು ದಿನದಲ್ಲಿ 6 ಮಂದಿ ಸಾವನ್ನಪ್ಪಿದ್ದು, 836 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

dengue
ಡೆಂಗ್ಯೂ

By

Published : Jul 10, 2023, 10:54 AM IST

ಢಾಕಾ:ಬಾಂಗ್ಲಾದೇಶದಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಕಳೆದ 24 ಗಂಟೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. 836 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಹೆಚ್‌ಎಸ್) ತಿಳಿಸಿದೆ.

ಹೊಸದಾಗಿ ಪತ್ತೆಯಾದ ಡೆಂಗ್ಯೂ ಸೋಂಕಿತರೂ ಸೇರಿ ಈ ವರ್ಷ ಇಲ್ಲಿಯವರೆಗೆ ಒಟ್ಟು 12,954 ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಡಿಜಿಹೆಚ್‌ಎಸ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾನುವಾರ ರಾಜಧಾನಿ ಢಾಕಾವೊಂದರಲ್ಲೇ 516 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ.

ಈ ವರ್ಷ ಸಾವಿನ ಸಂಖ್ಯೆ 73ಕ್ಕೆ ತಲುಪಿದೆ. ಜುಲೈನಲ್ಲಿ 26 ಮಂದಿ ಬಲಿಯಾಗಿರುವುದು ವರದಿಯಾಗಿದೆ. ಜೂನ್‌ನಲ್ಲಿ 34, ಮೇನಲ್ಲಿ 2, ಏಪ್ರಿಲ್‌ನಲ್ಲಿ ಎರಡು, ಫೆಬ್ರವರಿಯಲ್ಲಿ ಮೂರು ಮತ್ತು ಜನವರಿಯಲ್ಲಿ ಆರು ಸಾವುಗಳು ಸಂಭವಿಸಿವೆ. ಜನವರಿ 1 ರಿಂದ ಜುಲೈ 9 ರವರೆಗೆ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 10,131 ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಜೂನ್-ಸೆಪ್ಟೆಂಬರ್ ಮಾನ್ಸೂನ್ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಅತಿ ಹೆಚ್ಚು ಡೆಂಗ್ಯೂ ಕೇಸ್​ಗಳು ದಾಖಲಾಗುತ್ತವೆ.

ಡೆಂಗ್ಯೂ ಹೇಗೆ ಹರಡುತ್ತದೆ?:ಡೆಂಗ್ಯೂ ಜ್ವರವು ಸೊಳ್ಳೆಗಳಿಂದ ಹರಡುವ ರೋಗ. ಪ್ರಪಂಚದ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸೊಳ್ಳೆಗಳಿಂದ ಬರುವಂತಹ ಅಪಾಯಕಾರಿ ರೋಗಗಳಲ್ಲಿ ಇದೂ ಕೂಡ ಒಂದು. ಡೆಂಗ್ಯೂವು ಜ್ವರ ಮತ್ತು ಜ್ವರ ತರಹದ ಲಕ್ಷಣಗಳನ್ನು ಉಂಟುಮಾಡುತ್ತದೆ. ತೀವ್ರ ಸ್ವರೂಪದ ಡೆಂಗ್ಯೂ ಜ್ವರವು ರಕ್ತಸ್ರಾವ, ರಕ್ತದೊತ್ತಡದಲ್ಲಿ ಹಠಾತ್ ಕುಸಿತ ಮತ್ತು ಸಾವಿಗೆ ಕಾರಣವಾಗಬಹುದು.

ಡೆಂಗ್ಯೂ ಜ್ವರದ ಲಕ್ಷಣಗಳಿವು..: ಡೆಂಗ್ಯೂ ಜ್ವರದ ಮುಖ್ಯ ಲಕ್ಷಣವೆಂದರೆ ಹಠಾತ್ ಜ್ವರ, ತಲೆನೋವು, ಸ್ನಾಯು ನೋವು, ಹಸಿವು ಕಡಿಮೆಯಾಗುವುದು, ವಾಕರಿಕೆ, ವಾಂತಿ, ಆಯಾಸ, ಗಂಟಲು ನೋವು ಮತ್ತು ಕೆಮ್ಮು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಕೆಲವರಲ್ಲಿ ಬೆನ್ನು ನೋವು, ಹೊಟ್ಟೆ ನೋವು, ಕಣ್ಣುಗಳ ನೋವು ಮತ್ತು ದೇಹದ ಮೇಲೆ ಕೆಂಪು ಕಲೆಗಳು ಸಹ ಕಂಡು ಬರುತ್ತವೆ. ಇನ್ನೂ ಕೆಲವರಲ್ಲಿ ತೀವ್ರವಾದ ಹೊಟ್ಟೆ ನೋವು, ಉಸಿರಾಟದ ತೊಂದರೆ, ಮೂತ್ರ ವಿಸರ್ಜನೆಯಲ್ಲಿ ಹಠಾತ್ ಇಳಿಕೆ, ಮೂರ್ಛೆ ಲಕ್ಷಣಗಳು, ಜಾಂಡೀಸ್, ದೇಹದ ಯಾವುದೇ ಭಾಗದಿಂದ ರಕ್ತಸ್ರಾವ, ಕಪ್ಪು ಮಲಬದ್ದತೆ ಕಾಣಿಸಿಕೊಳ್ಳಲಿವೆ. ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಭೇಟಿ ಮಾಡಿ, ರಕ್ತ ಪರೀಕ್ಷೆಗೊಳಗಾಗಬೇಕು.

ಇದನ್ನೂ ಓದಿ :ಭಾರತದಲ್ಲೇ ವಿಕಸನಗೊಳ್ಳುತ್ತಿದೆ ಡೆಂಘೀ ವೈರಸ್​​; ಅಧ್ಯಯನದಲ್ಲಿ ಬಹಿರಂಗ

ಡೆಂಗ್ಯೂನಿಂದ ರಕ್ಷಣೆ ಹೇಗೆ?: ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಸೊಳ್ಳೆ ಹಾವಳಿ ಹೆಚ್ಚಾಗಿರುವ ಕಾರಣ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು. ಕಟ್ಟಡಗಳ ಒಳಗೆ ಮತ್ತು ಹೊರಗೆ ಹಾಗೂ ಛಾವಣಿಗಳಲ್ಲಿ ನೀರು ನಿಲ್ಲದಂತೆ ಕಾಳಜಿ ವಹಿಸಿ. ಮಡಕೆಗಳು, ಚಿಪ್ಪುಗಳು, ಟಯರ್​ಶೇಖರಿಸದಿರಿ. ನೀರಿನ ಪಾತ್ರೆ ಮತ್ತು ತೊಟ್ಟಿಗಳನ್ನು ಮುಚ್ಚಿಡಿ. ಸೊಳ್ಳೆ ಕಡಿತವನ್ನು ತಪ್ಪಿಸಲು ಸೊಳ್ಳೆ ಪರದೆ ಬಳಸಿ. ಹಾಗೂ ಜ್ವರದ ಲಕ್ಷಣ ಇರುವವರು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಬೇಕು. ಡೆಂಗ್ಯೂ ಲಕ್ಷಣ ಕಾಣಿಸಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕ ಮಾಡಬೇಕು.

ABOUT THE AUTHOR

...view details