ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ, ಇಂಧನ ದರಗಳಲ್ಲಿನ ಏರಿಳಿತಗಳ ಕಾರಣದಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕಾಗಿ ನೆರವು ನೀಡುವಂತೆ ಬಾಂಗ್ಲಾದೇಶವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗೆ ಮನವಿ ಮಾಡಿದೆ. ಇತ್ತೀಚಿನ ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯುತ್ ಕೊರತೆ ಸಹ ಎದುರಾಗಿದ್ದು, ಕೆಲವೊಮ್ಮೆ 13 ತಾಸುಗಳವರೆಗೆ ವಿದ್ಯುತ್ ಕಡಿತವಾಗುತ್ತಿದೆ. ಇದರ ಜೊತೆಗೆ ಸಾಕಷ್ಟು ಡೀಸೆಲ್, ಗ್ಯಾಸ್ ಸಹ ಸಿಗದೆ ಜನ ಪರದಾಡುತ್ತಿದ್ದಾರೆ. ಏರ್ ಕಂಡೀಶನರ್ಗಳ ಬಳಕೆಯನ್ನು ನಿಲ್ಲಿಸುವಂತೆ ದೇಶದ ಹತ್ತಾರು ಸಾವಿರ ಮಸೀದಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ದೇಶದ ಕರೆನ್ಸಿ ಮೌಲ್ಯ ಸತತವಾಗಿ ಕುಸಿಯುತ್ತಿದ್ದು, ವಿದೇಶಿ ವಿನಿಮಯ ಸಂಗ್ರಹವೂ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಈ ಮಧ್ಯೆ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡುವಂತೆ ಐಎಂಎಫ್ಗೆ ಮನವಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶವು ವಾಷಿಂಗ್ಟನ್ ಮೂಲದ ಸಾಲದಾತ ಸಂಸ್ಥೆಯಿಂದ 4.5 ಶತಕೋಟಿ ಡಾಲರ್‌ಗಳನ್ನು ಬಯಸುತ್ತಿದೆ ಎಂದು ಸ್ಥಳೀಯ ಪತ್ರಿಕೆ ಡೈಲಿ ಸ್ಟಾರ್ ವರದಿ ಮಾಡಿದೆ.