ಢಾಕಾ(ಬಾಂಗ್ಲಾದೇಶ):ಬಾಂಗ್ಲಾದೇಶದ ಮುಖ್ಯ ಚುನಾವಣಾ ಆಯುಕ್ತ ಕಾಜಿ ಹಬೀಬುಲ್ ಅವಲ್ ಅವರು 12ನೇ ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಬುಧವಾರ ಪ್ರಕಟಿಸಿದರು. 2024ರ ಜನವರಿ 7 ರಂದು ಚುನಾವಣೆ ನಿಗದಿಯಾಗಿದೆ.
90 ದಿನಗಳಲ್ಲಿ ರಾಷ್ಟ್ರೀಯ ಚುನಾವಣೆ ನಡೆಸುವ ಸಾಂವಿಧಾನಿಕ ಜವಾಬ್ದಾರಿಯನ್ನು ಅವರು ಉಲ್ಲೇಖಿಸಿದರು. ರಾಷ್ಟ್ರೀಯ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದರು.
ನಾಮಪತ್ರ ಸಲ್ಲಿಕೆಗೆ ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ಡಿಸೆಂಬರ್ 1 ರಿಂದ 4 ರ ನಡುವೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಡಿಸೆಂಬರ್ 17 ಕೊನೆಯ ದಿನವಾಗಿದೆ. ಚುನಾವಣಾ ವೇಳಾಪಟ್ಟಿಯನ್ನು ಅನಾವರಣಗೊಳಿಸಿದ ಮುಖ್ಯ ಚುನಾವಣಾ ಆಯುಕ್ತರು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.