ಬಾಂಗ್ಲಾದೇಶ:ನೆರೆಯ ಬಾಂಗ್ಲಾ ದೇಶದಲ್ಲಿ ಡೆಂಗ್ಯೂ ರೋಗ ದಿನ ಕಳೆದಂತೆ ಹಬ್ಬುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 10 ಮಂದಿ ದೇಶದ ವಿವಿಧೆಡೆ ಸಾವನ್ನಪ್ಪಿದ್ದಾರೆ. ಒಟ್ಟು 2,495 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಬಾಂಗ್ಲಾದಲ್ಲಿ ಡೆಂಗ್ಯೂ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ 303 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 63,968 ಕ್ಕೇರಿದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ತಿಳಿಸಿದೆ.
ಜೂನ್-ಸೆಪ್ಟೆಂಬರ್ನ ಮಾನ್ಸೂನ್ ಅವಧಿಯು ಬಾಂಗ್ಲಾದಲ್ಲಿ ಡೆಂಗ್ಯೂ ಜ್ವರದ ತಿಂಗಳುಗಳಾಗಿವೆ. ಹಾಗಾಗಿ, ದೇಶವನ್ನು ಸೊಳ್ಳೆ ಹರಡುವ ರೋಗಗಳಿಗೆ ಒಳಗಾಗುವ ಹೆಚ್ಚಿನ ಅಪಾಯದ ರಾಷ್ಟ್ರವೆಂದೂ ಪರಿಗಣಿಸಲಾಗಿದೆ. ಸಾಮಾನ್ಯ ಜ್ವರದಂತೆ ಕಾಣಿಸಿಕೊಳ್ಳುವ ಡೆಂಗ್ಯೂ ಅತಿಯಾದರೆ ಪ್ರಾಣವನ್ನೇ ತೆಗೆಯುತ್ತದೆ. ವರದಿಗಳ ಪ್ರಕಾರ, ವಿಶ್ವದ 40% ಜನರು ಡೆಂಗ್ಯೂ ಹರಡುವ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 400 ಮಿಲಿಯನ್ ಜನರು ಇದೇ ಜ್ವರದಿಂದ ಬಳಲುತ್ತಾರೆ. 400 ಮಿಲಿಯನ್ ಜನರಲ್ಲಿ 100 ಮಿಲಿಯನ್ ಜನರ ಆರೋಗ್ಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. 22 ಸಾವಿರ ಜನ ಪ್ರತಿವರ್ಷ ಡೆಂಗ್ಯೂ ಜ್ವರಕ್ಕೆ ಸಾವನ್ನಪ್ಪುತ್ತಿದ್ದಾರೆ.
ಡೆಂಗ್ಯೂಗೆ ಕಾರಣವಾಗುವ ಸೊಳ್ಳೆ ಯಾವುದು ಗೊತ್ತೇ?:ಮಾನವನಿಗೆ ಕಚ್ಚಿ ರಕ್ತ ಹೀರುವ ಮೂಲಕ ಜ್ವರ ಹಬ್ಬಿಸುವುದು ಏಡಿಸ್ ಈಜಿಪ್ತಿ ಜಾತಿಯ ಸೊಳ್ಳೆಗಳು. ಇವು ನಿಂತ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಮನೆಯ ಹೊರಗೆ ಬಿಸಾಡಿರುವ ಟಯರ್ಗಳು, ತೆರೆದಿರುವ ಬಾಟಲ್ಗಳಲ್ಲಿ ಶೇಖರಣೆಯಾಗಿರುವ ನೀರು, ಡ್ರಮ್, ಹೂದಾನಿ, ಮರದ ಪೊಟರೆಗಳಲ್ಲಿ ನಿಂತ ನೀರಿನಲ್ಲಿ ಇಂಥ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಹಾಗಾಗಿ, ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಿ ವಾರಕ್ಕೊಮ್ಮೆಯಾದರೂ ಮನೆಯ ಸುತ್ತಮುತ್ತ ಸ್ವಚ್ಛ ಮಾಡಬೇಕು.
ಈ ಸೊಳ್ಳೆ ಒಂದು ಬಾರಿ ಕಚ್ಚಿದರೆ 4 ರಿಂದ 7 ದಿನದೊಳಗೆ ಡೆಂಗ್ಯೂ ಜ್ವರದ ಲಕ್ಷಣ ಗೋಚರಿಸುತ್ತದೆ. ತಕ್ಷಣವೇ ಚಿಕಿತ್ಸೆ ತೆಗೆದುಕೊಂಡರೆ ಉತ್ತಮ. ನಿರ್ಲಕ್ಷ್ಯವಹಿಸಿದರೆ ಜ್ವರ ಉಲ್ಬಣಿಸುವ ಸಾಧ್ಯತೆ ಹೆಚ್ಚು. ಝಿಕಾ, ಚಿಕೂನ್ ಗುನ್ಯಾ ಹಾಗೂ ಇನ್ನಿತರ ವೈರಸ್ಗಳನ್ನೂ ಸಹ ಏಡಿಸ್ ಈಜಿಪ್ತಿ ಜಾತಿಯ ಸೊಳ್ಳೆಗಳು ಹರಡುತ್ತವೆ. 4 ಬಗೆಯ ಡೆಂಗ್ಯೂ ವೈರಸ್ ಪ್ರಬೇಧಗಳಿರುವುದರಿಂದ ಒಬ್ಬ ಮನುಷ್ಯನಿಗೆ ಆತನ ಜೀವಿತಾವಧಿಯಲ್ಲಿ ನಾಲ್ಕು ಬಾರಿ ಡೆಂಗ್ಯೂ ಜ್ವರ ಕಾಡಬಹುದು. ಇದಕ್ಕಾಗಿ ಮನೆಯಲ್ಲೇ ಸೊಳ್ಳೆ ಓಡಿಸುವ ಔಷಧಿ ಬಳಸಿ, ಪೂರ್ತಿ ಮೈ ಮುಚ್ಚುವಂತೆ ಬಟ್ಟೆ ಧರಿಸಿ, ಮನೆಯೊಳಗೆ ಸೊಳ್ಳೆ ಪ್ರವೇಶಿಸದಂತೆ ಬಾಗಿಲು ಕಿಟಕಿಗಳಿಗೆ ಸ್ಕ್ರೀನ್ ಹಾಕಿ, ಇಳಿಸಂಜೆ ಹೊತ್ತಲ್ಲಿ ಹೊರಗಡೆ ಓಡಾಡದೆ ಇರುವುದು ಡೆಂಗ್ಯೂವಿನಿಂದ ಪಾರಾಗಲು ಮೊದಲ ರಕ್ಷಣೆಯಾಗಿದೆ.
ಇದನ್ನೂ ಓದಿ:Rainy Season Diseases: ಮಳೆಗಾಲದ ಈ ರೋಗಗಳ ಬಗ್ಗೆ ಬೇಡ ನಿರ್ಲಕ್ಷ್ಯ; ಆರೋಗ್ಯದ ಮುನ್ನೆಚ್ಚರಿಕೆ ಸದಾ ಅಗತ್ಯ