ಢಾಕಾ (ಬಾಂಗ್ಲಾದೇಶ) : ಸಾರ್ವತ್ರಿಕ ಚುನಾವಣೆಗೆ ಒಂದು ದಿನ ಮುನ್ನವೇ ಇಲ್ಲಿನ ಬಂದರು ನಗರವಾದ ಬೆನಾಪೋಲ್‌ನಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತರಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಶಂಕಿತ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಅನುಮಾನ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಸಾರ್ವತ್ರಿಕ ಚುನಾವಣೆಯನ್ನು ಪ್ರಮುಖ ಪ್ರತಿಪಕ್ಷ ಬಿಎನ್‌ಪಿ ಬಹಿಷ್ಕರಿಸಿದೆ.
ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಪಶ್ಚಿಮ ಬಂಗಾಳ ರಾಜ್ಯದ ಗಡಿಯಲ್ಲಿನ ಪಟ್ಟಣವಾದ ಬೆನಪೋಲ್‌ನಿಂದ ಹೊರಟ ಬೆನಪೋಲ್ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಲ್ಲಿ ಢಾಕಾದ ಕಮಲಾಪುರ ರೈಲು ನಿಲ್ದಾಣ ತಲುಪುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. 'ಇದುವರೆಗೆ ನಾಲ್ಕು ಶವಗಳನ್ನು ಪತ್ತೆ ಮಾಡಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ' ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲಿನ ಸುಮಾರು 292 ಪ್ರಯಾಣಿಕರಲ್ಲಿ ಹೆಚ್ಚಿನವರು ಭಾರತದಿಂದ ತವರಿಗೆ ಮರಳುತ್ತಿದ್ದರು. ರೈಲು ನಿಲ್ದಾಣದ ಸಮೀಪವಿರುವ ಗೋಪಿಬಾಗ್ ಪ್ರದೇಶವ ತಲುಪುತ್ತಿದ್ದಂತೆ ರೈಲಿಗೆ ಬೆಂಕಿ ಹಚ್ಚಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 'ಕೃತ್ಯ ಎಸಗಿದ ಆರೋಪಿಗಳು ಸಾಮಾನ್ಯ ಪ್ರಯಾಣಿಕರಂತೆ ವೇಷ ಧರಿಸಿರಬಹುದು. ರಾತ್ರಿ 9:07 ರ ಸುಮಾರಿಗೆ ಈ ಬಗ್ಗೆ ತುರ್ತು ಸೇವಾ ಸಂಖ್ಯೆಯಿಂದ ಮಾಹಿತಿ ಸಿಕ್ಕಿತು' ಎಂದು ಢಾಕಾ ರೈಲ್ವೆ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ರೈಲಿನ ಕಿಟಕಿಯ ಮೂಲಕ ಮಧ್ಯವಯಸ್ಕ ವ್ಯಕ್ತಿಯೊಬ್ಬನನ್ನು ಹೊರತರಲು ಯತ್ನಿಸಲಾಯಿತು. ಆದರೆ, ಆತ ತನ್ನ ಹೆಂಡತಿ ಮತ್ತು ಮಕ್ಕಳನ್ನು ರಕ್ಷಿಸಲು ಕೇಳಿಕೊಂಡ. ಬಳಿಕ ಏಕಾಏಕಿ ಬೆಂಕಿ ಆವರಿಸಿಕೊಂಡ ಕಾರಣ ರೈಲಿನಿಂದ ಹೊರಬರಲಾಗದೆ ಮೃತಪಟ್ಟ ಎಂದು ಯುವಕನೊಬ್ಬ ಹೇಳಿಕೊಂಡ ಬಗ್ಗೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.