ಹವಾಯಿ (ಅಮೆರಿಕ):ಹವಾಯಿಯಲ್ಲಿ ಸಂಭವಿಸಿದ ಕಾಳ್ಗಿಚ್ಚಿನಿಂದ ಕನಿಷ್ಠ 97 ಜನರು ಸಾವನ್ನಪ್ಪಿದ್ದಾರೆ. ಈ ಮೊದಲು ಅಧಿಕಾರಿಗಳು ಬೆಂಕಿಯಿಂದ ಕನಿಷ್ಠ 115 ಜನರು ಸಾವನ್ನಪ್ಪಿದ್ದರು ಎಂದು ಅಂದಾಜಿಸಿದ್ದರು. ಆದರೆ, ಡಿಎನ್ಎ ಪರೀಕ್ಷೆಗಳನ್ನು ನಡೆಸಿ, ಮೃತರ ಗುರುತು ಹಾಗೂ ಸಂಖ್ಯೆಯನ್ನು ಪತ್ತೆ ಹಚ್ಚಿದ್ದು, ಮೃತರ ಸಂಖ್ಯೆ 97 ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಎಂಐಎ ಅಕೌಂಟಿಂಗ್ ಏಜೆನ್ಸಿಯ ಪ್ರಯೋಗಾಲಯ ನಿರ್ದೇಶಕ ಜಾನ್ ಬೈರ್ಡ್ ಪತ್ರಿಕಾಗೋಷ್ಠಿಯಲ್ಲಿ ಘಟನೆಯಲ್ಲಿ ಪ್ರಸ್ತುತ ಸಾವನ್ನಪ್ಪಿದವರ ಸಂಖ್ಯೆಯನ್ನು ಕನಿಷ್ಠ ಎಂದು ಪರಿಗಣಿಸಬೇಕು ಎಂದಿದ್ದಾರೆ. ಆಗಸ್ಟ್ 8 ರಂದು ಈ ಕಾಳ್ಗಿಚ್ಚು ಹವಾಯಿಯ ಲಾಹೈನಾದಲ್ಲಿ ಹಬ್ಬಿತ್ತು. ಈ ಬೆಂಕಿಯಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ನಿರ್ಧರಿಸುವುದು ಕಷ್ಟಕರವಾಗಿತ್ತು. ಏಕೆಂದರೆ ಈ ಘಟನೆಯಲ್ಲಿ ಅರ್ಧದಷ್ಟು ಜನರು ಬೆಂಕಿಯ ಹಾನಿಯಿಂದ ಸಾವನ್ನಪ್ಪಿದರೆ, ಇನ್ನು ಕೆಲವರು ಸಾವಿನಿಂದ ತಪ್ಪಿಸಿಕೊಳ್ಳಲು ಹೋಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹಗಳ ಪತ್ತೆ ಕಾರ್ಯಚರಣೆ ವೇಳೆ ಮಾನವನ ಅವಶೇಷಗಳೊಂದಿಗೆ ಸಾವನ್ನಪ್ಪಿದ್ದ ಪ್ರಾಣಿಗಳ ಮೃತದೇಹಗಳು ದೊರಕಿವೆ. ಇದರಿಂದಾಗಿ ಮೃತರನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಇದೀಗ ಸಾವನ್ನಪ್ಪಿರುವ ಒಟ್ಟು 74 ಮಂದಿಯನ್ನು ನಿಖರವಾಗಿ ಗುರುತಿಸಲಾಗಿದೆ ಎಂದು ಮಾಯಿ ಪೊಲೀಸ್ ಮುಖ್ಯಸ್ಥ ಜಾನ್ ಪೆಲ್ಲೆಟಿಯರ್ ಮಾಧ್ಯಮಗಳಿಗೆ ಹೇಳಿದ್ದಾರೆ.