ನವದೆಹಲಿ:ಆಸ್ಟ್ರೇಲಿಯಾದ ಹೊಸ ಪ್ರಧಾನಿಯಾಗಿ ಲೇಬರ್ ಪಕ್ಷದ ಆ್ಯಂಟನಿ ಅಲ್ಬನೆಸ್ ಚುನಾಯಿತರಾಗಿದ್ದಾರೆ. ಹೊಸ ಪ್ರಧಾನಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದಲ್ಲಿರುವ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓ'ಫಾರೆಲ್, 'ಅಲ್ಬನೆಸ್ ಭಾರತಕ್ಕೆ ಹೊಸಬರೇನಲ್ಲ. ಅವರು 1991ರಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಭಾರತದ ಉದ್ದಗಲ ಸಂಚರಿಸಿದ್ದರು. 2018ರಲ್ಲಿ ಸಂಸದೀಯ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ಉಭಯ ದೇಶಗಳ ಆರ್ಥಿಕ, ಕಾರ್ಯತಂತ್ರ ಮತ್ತು ಜನರ ನಡುವಿನ ಸಂಪರ್ಕ ಬಲಪಡಿಸಲು ಶ್ರಮಿಸಿದ್ದರು' ಎಂದು ಟ್ವೀಟ್ ಮಾಡಿದ್ದಾರೆ.
ಮೇ 24 ರಂದು ಕ್ವಾಡ್ ಶೃಂಗಸಭೆ:ಮುಂಬರುವ ಕ್ವಾಡ್ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಅಲ್ಬನೆಸ್ ಟೋಕಿಯೊಗೆ ಪ್ರಯಾಣಿಸಿದರೆ, ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆ ಇದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಂಧವ್ಯ ಕಳೆದ ಕೆಲವು ವರ್ಷಗಳಿಂದ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ತಿಂಗಳು, ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ವೈವಿಧ್ಯಮಯಗೊಳಿಸುವ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಮೋದಿ ಅಭಿನಂದನೆ: 'ಆಸ್ಟ್ರೇಲಿಯನ್ ಲೇಬರ್ ಪಾರ್ಟಿಯ ವಿಜಯಕ್ಕಾಗಿ ಅಲ್ಬನೆಸ್ ಅವರಿಗೆ ಅಭಿನಂದನೆಗಳು. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹಂಚಿಕೆಯ ಆದ್ಯತೆಗಳಿಗಾಗಿ ನಾನು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಭಯೋತ್ಪಾದನೆಯ ಬೆದರಿಕೆ ತೊಡೆದುಹಾಕಿ ಶಾಂತಿ ಸ್ಥಾಪಿಸಲು ಪಾಕಿಸ್ತಾನ ಪ್ರತಿಜ್ಞೆ!