ಕರ್ನಾಟಕ

karnataka

ETV Bharat / international

ಬೆಂಗಳೂರಿನಲ್ಲಿ ಆರಂಭವಾಗಲಿದೆ ಆಸ್ಟ್ರೇಲಿಯಾ ಕಾನ್ಸುಲೆಟ್ - ಪ್ರಧಾನಿ ನರೇಂದ್ರ ಮೋದಿ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬ್ರಿಸ್ಬೇನ್‌ನಲ್ಲಿ ಇಂಡಿಯನ್ ಕಾನ್ಸುಲೆಟ್ ಕಚೇರಿ ಆರಂಭಿಸುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಬೆಂಗಳೂರಲ್ಲಿ ಹೊಸದಾಗಿ ಕಾನ್ಸುಲೆಟ್ ಆರಂಭಿಸುವುದಾಗಿ ಹೇಳಿದ್ದಾರೆ.

Australia's Prime Minister Anthony Albanese
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್

By

Published : May 24, 2023, 1:03 PM IST

ಸಿಡ್ನಿ (ಆಸ್ಟ್ರೇಲಿಯಾ): ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲು ಉಭಯ ದೇಶಗಳ ಪ್ರಯತ್ನದ ಭಾಗವಾಗಿ ಭಾರತವು ಬ್ರಿಸ್ಬೇನ್‌ನಲ್ಲಿ ಕಾನ್ಸುಲೆಟ್‌ ಕಚೇರಿ ತೆರೆಯಲಿದೆ ಎಂದು ನಿನ್ನೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಶೀಘ್ರವೇ ಕಾನ್ಸುಲೆಟ್ ಜನರಲ್ ತೆರೆಯಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಬುಧವಾರ ಪ್ರಕಟಿಸಿದರು.

ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಲ್ಬನೀಸ್, "ಬೆಂಗಳೂರಿನಲ್ಲಿ ಹೊಸ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಸ್ಥಾಪನೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಆಸ್ಟ್ರೇಲಿಯಾದ ರಾಜತಾಂತ್ರಿಕ ಹೆಜ್ಜೆ ಗುರುತನ್ನು ಬೆಂಗಳೂರಿಗೆ ವಿಸ್ತರಿಸುವುದರಿಂದ ಆಸ್ಟ್ರೇಲಿಯಾದ ವ್ಯವಹಾರಗಳನ್ನು ಭಾರತದ ಉತ್ಕರ್ಷದ ಡಿಜಿಟಲ್ ಆರ್ಥಿಕತೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಸಂಪರ್ಕಿಸುತ್ತದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಉಭಯ ದೇಶಗಳ ನಡುವೆ ಸಂಪರ್ಕ, ವ್ಯವಹಾರಕ್ಕೆ ಈ ಕಚೇರಿಯಿಂದ ನೆರವು ದೊರೆಯಲಿದೆ. ಇದರ ಜತೆಗೆ ಬ್ರಿಸ್ಬೇನ್‌ನಲ್ಲಿ ಕಾನ್ಸುಲೆಟ್ ಜನರಲ್‌ ಸ್ಥಾಪನೆಯ ಭಾರತದ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ" ಎಂದರು.

5 ನೇ ರಾಜತಾಂತ್ರಿಕ ಕಚೇರಿ: ಬೆಂಗಳೂರು ಕಾನ್ಸುಲೆಟ್ ಕಚೇರಿ ಸ್ಥಾಪನೆ ಆಸ್ಟ್ರೇಲಿಯಾದಿಂದ ಭಾರತದಲ್ಲಿ ಇರುವ 5 ನೇ ರಾಜತಾಂತ್ರಿಕ ಕಚೇರಿಯಾಗಿರಲಿದೆ. ಉಳಿದಂತೆ ನವದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿವೆ. ಭಾರತ ಪ್ರಸ್ತುತ ಸಿಡ್ನಿ, ಮೆಲ್ಬೋರ್ನ್ ಮತ್ತು ಪರ್ತ್‌ನಲ್ಲಿ 3 ಕಾನ್ಸುಲೇಟ್‌ಗಳನ್ನು ಹೊಂದಿದೆ.

ಉಭಯ ನಾಯಕರು ಚಲನಶೀಲತೆ, ವಲಸೆ ಮತ್ತು ಹಸಿರು ಹೈಡ್ರೋಜನ್ ಕಾರ್ಯಪಡೆಯ ಕುರಿತು ತಿಳುವಳಿಕೆ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ಒಂದು ವರ್ಷದಲ್ಲಿ ಮೋದಿಯೊಂದಿಗಿನ ಭೇಟಿಯ ಬಗ್ಗೆ ಅಲ್ಬನೀಸ್ ಮಾತನಾಡಿದ್ದಾರೆ. "ಪ್ರಧಾನಿಯಾಗಿ ನನ್ನ ಮೊದಲ ವರ್ಷದಲ್ಲಿ ನಾನು ಪ್ರಧಾನಿ ಮೋದಿಯನ್ನು ಆರು ಬಾರಿ ಭೇಟಿ ಮಾಡಿದ್ದೇನೆ. ಇದು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಗಾಢವಾಗಿಸುವ ಮೌಲ್ಯವನ್ನು ತಿಳಿಸುತ್ತದೆ. ಭಾರತ-ಆಸ್ಟ್ರೇಲಿಯನ್ ಸಮುದಾಯದ ಕೊಡುಗೆಗಳಿಂದಾಗಿ ಆಸ್ಟ್ರೇಲಿಯಾ ಉತ್ತಮ ಸ್ಥಳವಾಗಿದೆ. 2 ದೇಶಗಳ ನಡುವೆ ಹೆಚ್ಚಿನ ಸಂಪರ್ಕಗಳನ್ನು ನೋಡಲು ನಾವು ಬಯಸುತ್ತೇವೆ. ಇಲ್ಲಿಗೆ ಭೇಟಿ ನೀಡಿ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ 20 ನಾಯಕರ ಶೃಂಗಸಭೆಗಾಗಿ ಭಾರತಕ್ಕೆ ತೆರಳಲು ನಾನು ಎದುರು ನೋಡುತ್ತಿದ್ದೇನೆ" ಎಂದು ಪ್ರಧಾನಿ ಅಲ್ಬನೀಸ್ ಹೇಳಿದರು.

ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಕ್ವಾಡ್ ಶೃಂಗಸಭೆಯ ಬಗ್ಗೆಯೂ ಅಲ್ಬನೀಸ್ ಮಾತನಾಡಿದರು. "ಪ್ರಧಾನಿ ಮೋದಿಯವರ ಆಸ್ಟ್ರೇಲಿಯಾ ಭೇಟಿಯು ಭಾರತದೊಂದಿಗೆ ಆಸ್ಟ್ರೇಲಿಯಾ ಹೊಂದಿರುವ ನಿಕಟ ಮತ್ತು ಬಲವಾದ ಸಂಬಂಧವನ್ನು ಬಲಪಡಿಸಿದೆ" ಎಂದು ಅವರು ತಿಳಿಸಿದರು. ಮೋದಿ ಅವರು ಇಂದು ಆಸ್ಟ್ರೇಲಿಯಾದ ಗವರ್ನರ್ ಜನರಲ್ ಡೇವಿಡ್ ಹರ್ಲಿ ಮತ್ತು ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರನ್ನು ಭೇಟಿ ಮಾಡಿದರು. ಉಭಯ ದೇಶಗಳ ನಡುವಿನ ಜನರ ಸಂಪರ್ಕ ಮತ್ತು ದೀರ್ಘಕಾಲದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು.

ಬ್ರಿಸ್ಬೇನ್‌ನಲ್ಲಿ ಕಾನ್ಸುಲೆಟ್‌ ಸ್ಥಾಪನೆ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಿಡ್ನಿಯ ಫುಟ್ಬಾಲ್‌ ಮೈದಾನದಲ್ಲಿ ನಡೆದ ಬೃಹತ್‌ ಸಭೆಯಲ್ಲಿ ಸುಮಾರು 20 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಇದೇ ವೇಳೆ ಬ್ರಿಸ್ಬೇನ್‌ನಲ್ಲಿ ಭಾರತದ ಕಾನ್ಸುಲೆಟ್‌ ಕಚೇರಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು.

ಇದನ್ನೂ ಓದಿ:ಭಾರತ- ಆಸ್ಟ್ರೇಲಿಯಾ 'ಮುಕ್ತ' ಸಂಬಂಧಗಳ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ABOUT THE AUTHOR

...view details