ಜೆರುಸಲೇಂ: ಲೆಬನಾನ್‌ನ ಹಿಜ್ಬುಲ್ಲಾ ಗುಂಪು ಭಾನುವಾರ ನಡೆಸಿದ ದಾಳಿಯಲ್ಲಿ ಏಳು ಇಸ್ರೇಲಿ ಸೈನಿಕರು ಸೇರಿದಂತೆ 17 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ಸೇನೆ, ಲೆಬನಾನ್-ಇಸ್ರೇಲ್ ಗಡಿಯಲ್ಲಿ ಇರಾನ್ ಬೆಂಬಲಿತ ಗುಂಪು ಮತ್ತು ಇಸ್ರೇಲ್ ಸೇನೆಯ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದೆ.
ಇಬ್ಬರ ಸ್ಥಿತಿ ಗಂಭೀರ:ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಯುದ್ಧ ನಡೆಯುತ್ತಿದ್ದು, ಇದು ಇನ್ನಷ್ಟು ತೀವ್ರಗೊಳ್ಳುವ ಅಪಾಯವಿದೆ. ಉತ್ತರ ಇಸ್ರೇಲ್‌ನ ಮನರಾ ಪ್ರದೇಶದಲ್ಲಿ ಭಾನುವಾರ ನಡೆದ ಮೋರ್ಟಾರ್ ದಾಳಿಯ ಪರಿಣಾಮವಾಗಿ ಏಳು ಐಡಿಎಫ್ ಸೈನಿಕರು ಗಾಯಗೊಂಡಿದ್ದಾರೆ. ಸ್ಥಳವನ್ನು ಗುರುತಿಸದೆ ನಡೆಸಿರುವ ರಾಕೆಟ್ ದಾಳಿಯಿಂದ 10 ನಾಗರಿಕರು ಸಹ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಹಮಾಸ್ನಿಂದ ದಾಳಿ:ಒಂದು ಗಂಟೆಯಲ್ಲಿ ಲೆಬನಾನ್‌ನಿಂದ 15 ರಾಕೆಟ್ ದಾಳಿಗಳು ನಡೆದಿದೆ. ಇದರಲ್ಲಿ ನಾಲ್ಕು ರಾಕೆಟ್ಗಳನ್ನು ನಾಶಪಡಿಸಲಾಗಿದೆ. ಉಳಿದವು ತೆರೆದ ಪ್ರದೇಶಗಳಲ್ಲಿ ಬಿದ್ದಿವೆ. ಉತ್ತರ ಹೈಫಾ ಮತ್ತು ದಕ್ಷಿಣ ಲೆಬನಾನ್‌ನಿಂದ ಇಸ್ರೇಲಿ ಗಡಿ ಪಟ್ಟಣಗಳಾದ ನೌರಾ ಮತ್ತು ಶ್ಲೋಮಿ ಮೇಲೆ ಈ ರಾಕೆಟ್ ದಾಳಿ ನಡೆದಿದ್ದು, ಇದರ ಹೊಣೆಯನ್ನು ಹಮಾಸ್‌ನ ಮಿಲಿಟರಿ ವಿಭಾಗವು ವಹಿಸಿಕೊಂಡಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.