ಬಮಾಕೊ (ಮಾಲಿ) :ಆಫ್ರಿಕಾದ ದೇಶ ಮಾಲಿಯ ಉತ್ತರ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗುರುವಾರ ಇಲ್ಲಿ ಇಸ್ಲಾಮಿಸ್ಟ್ ಬಂಡುಕೋರರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 49 ನಾಗರಿಕರು ಮತ್ತು 15 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ದೇಶದ ಮಿಲಿಟರಿ ತಿಳಿಸಿದೆ. ನೈಜರ್ ನದಿಯ ಟಿಂಬಕ್ಟು ನಗರದ ಸಮೀಪವಿದಲ್ಲಿರುವ ಪ್ರಯಾಣಿಕರ ಬೋಟ್ ಮತ್ತು ಗಾವೊ ಪ್ರದೇಶದಲ್ಲಿರುವ ಮಾಲಿಯನ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಶೋಕಾಚರಣೆ: ಇಸ್ಲಾಮಿಸ್ಟ್ ಉಗ್ರಗಾಮಿ ದಂಗೆಕೋರ ಗುಂಪು ಜೆಎನ್‌ಐಎಂ ಮತ್ತು ಅಲ್ ಖೈದಾದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕೆಲವು ಸಶಸ್ತ್ರ ಸಜ್ಜಿತ ಗುಂಪುಗಳು ದಾಳಿಯ ಕುರಿತು ಹೇಳಿಕೊಂಡಿವೆ. ಹಾಗೆಯೇ, ಮಿಲಿಟರಿ ಪಡೆಗಳು ಕೂಡ ಸುಮಾರು 50 ದಾಳಿಕೋರರನ್ನು ಕೊಂದು ಹಾಕಿವೆ ಎಂದು ಮಾಲಿಯನ್ ಸರ್ಕಾರ ಪ್ರಕಟಣೆ ತಿಳಿಸಿದೆ. ಹುತಾತ್ಮರಾದ ನಾಗರಿಕರು ಮತ್ತು ಸೈನಿಕರ ಗೌರವಾರ್ಥ ಶುಕ್ರವಾರದಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.
ವಿಶ್ವಸಂಸ್ಥೆಯ ಮಾನವೀಯ ಏಜೆನ್ಸಿಯು ಆಗಸ್ಟ್ನಲ್ಲಿ ನೀಡಿದ ವರದಿಯ ಪ್ರಕಾರ, 30,000 ಕ್ಕೂ ಹೆಚ್ಚು ನಿವಾಸಿಗಳು ನಗರ ಮತ್ತು ಹತ್ತಿರದ ಪ್ರದೇಶದಿಂದ ಪಲಾಯನ ಮಾಡಿದ್ದಾರೆ ಎಂದು ತಿಳಿಸಿದೆ. ಇನ್ನೊಂದೆಡೆ, ಸರ್ಕಾರದ ಕೋರಿಕೆಯ ಮೇರೆಗೆ ಯುಎನ್ ತನ್ನ 17,000 ಬಲವಾದ ಶಾಂತಿಪಾಲನಾ ಕಾರ್ಯಾಚರಣೆ MINUSMA ಅನ್ನು ಮಾಲಿಯಿಂದ ಹಿಂಪಡೆಯಲು ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಈ ಮಾರಣಾಂತಿಕ ದಾಳಿ ಸಂಭವಿಸಿದೆ. ಮಾಲಿಯಲ್ಲಿ ಶಾಂತಿಪಾಲನಾ ಕಾರ್ಯಾಚರಣೆ ಹಿಂತೆಗೆದುಕೊಳ್ಳುವಿಕೆಯು ವರ್ಷಾಂತ್ಯದೊಳಗೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ :ಬಾಂಬ್ಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಬಸ್.. 11 ಜನ ಸಾವು, ಹಲವಾರು ಜನ ಗಾಯ