ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ):ಸರಣಿ ಆತ್ಮಹತ್ಯಾ ದಾಳಿಯಿಂದ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ತತ್ತರಿಸಿದೆ. ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ದ್ರಾಬಾನ್ ಪ್ರದೇಶದ ಸ್ಥಳೀಯ ಪೊಲೀಸ್ ಠಾಣೆಯ ಮೇಲೆ ಭಯೋತ್ಪಾದಕರ ಗುಂಪೊಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ ಮೂವರು ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಈ ಆತ್ಮಾಹುತಿ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ಎಂಬ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ.
ದಾಳಿಕೋರರು ಭದ್ರತಾ ಆವರಣವನ್ನು ಪ್ರವೇಶಿಸಿದ ನಂತರ ಪ್ರಬಲವಾದ ಸ್ಫೋಟ ಸಂಭವಿಸಿದೆ. ಈ ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಬಳಿಕ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸುತ್ತಾ ಪೊಲೀಸ್ ಠಾಣೆಯ ಆವರಣಕ್ಕೆ ನುಗ್ಗಲು ಯತ್ನಿಸಿದ್ದರು. ತಕ್ಷಣವೇ ಸಕ್ರಿಯಗೊಂಡ ಭದ್ರತಾ ಪಡೆಗಳು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದರು. ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಪಾಕಿಸ್ತಾನ ಭದ್ರತಾ ಪಡೆ ಹೊಡೆದುರುಳಿಸಿದ್ದು, 16ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಇನ್ನು ಉಗ್ರರು ನಡೆಸಿದ ದಾಳಿಯಿಂದಾಗಿ ಪೊಲೀಸ್ ಠಾಣೆಯ ಮೇಲ್ಛಾವಣಿ ಕುಸಿದಿದೆ. ಗಾಯಾಳುಗಳನ್ನು ಡಿಐ ಖಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾರಬನ್ ತೆಹಸಿಲ್ ಅನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿದೆ. ಘಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.