ರಮಲ್ಲಾ :ವೆಸ್ಟ್ ಬ್ಯಾಂಕ್ (ಪಶ್ಚಿಮ ದಂಡೆ) ಪ್ರದೇಶದಲ್ಲಿ ಇಸ್ರೇಲಿ ಯೋಧರು ಹಾರಿಸಿದ ಗುಂಡಿಗೆ ಇಬ್ಬರು ಪ್ಯಾಲೆಸ್ಟೇನಿಯರು ಸಾವನ್ನಪ್ಪಿದ್ದಾರೆ. ಇಸ್ರೇಲಿ ಚೆಕ್‌ಪಾಯಿಂಟ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಇಸ್ರೇಲ್ ಗುಂಡಿನ ದಾಳಿಗೆ ಬಲಿಯಾದ ಓರ್ವ ಇದರಲ್ಲಿ ಸೇರಿದ್ದಾನೆ. ವೆಸ್ಟ್ ಬ್ಯಾಂಕ್ ನಗರವಾದ ರಮಲ್ಲಾ ಮತ್ತು ಜೆರುಸಲೆಮ್ ನಡುವಿನ ಇಸ್ರೇಲಿ ಸೇನಾ ಚೆಕ್‌ಪಾಯಿಂಟ್‌ನಲ್ಲಿ 18 ವರ್ಷದ ಇಸಾಕ್ ಅಜ್ಲೋನಿ ಎಂಬಾತ ಕೊಲ್ಲಲ್ಪಟ್ಟಿದ್ದಾನೆ ಎಂದು ಇಸ್ರೇಲಿ ಮತ್ತು ಪ್ಯಾಲೆಸ್ಟೈನ್ ಮೂಲಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಜೆರುಸಲೆಮ್‌ನ ಉತ್ತರದಲ್ಲಿರುವ ಕ್ಲಾಂಡಿಯಾ ಚೆಕ್‌ಪಾಯಿಂಟ್‌ನಲ್ಲಿ ಇಸಾಕ್ ಅಜ್ಲೋನಿ ಎಂಬಾತ ಇಸ್ರೇಲಿ ಸೈನಿಕರ ಮೇಲೆ ಗುಂಡು ಹಾರಿಸಿದ್ದ. ಇದರಲ್ಲಿ ಓರ್ವ ಇಸ್ರೇಲಿ ಭದ್ರತಾ ಸಿಬ್ಬಂದಿ ಲಘುವಾಗಿ ಗಾಯಗೊಂಡ ನಂತರ ಆತನನ್ನು ಇಸ್ರೇಲಿ ಸೈನಿಕರು ಕೊಂದು ಹಾಕಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. M16 ಸ್ವಯಂಚಾಲಿತ ಮೆಷಿನ್ ಗನ್‌ನೊಂದಿಗೆ ಇಸ್ರೇಲಿ ಚೆಕ್ ಪಾಯಿಂಟ್ಗೆ ಬಂದಿದ್ದ ಯುವಕ ಇಸ್ರೇಲಿ ಸೈನಿಕರು ಮತ್ತು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ಎಂದು ಇಸ್ರೇಲಿ ಪೊಲೀಸ್ ವಕ್ತಾರರು ದೃಢಪಡಿಸಿದ್ದಾರೆ.
ಫತಾಹ್ ಆಂದೋಲನದ ಸಶಸ್ತ್ರ ವಿಭಾಗವಾದ ಅಲ್ ಅಕ್ಸಾ ಹುತಾತ್ಮ ದಳವು (Al-Aqsa Martyrs Brigade) ಇಸ್ರೇಲಿ ಚೆಕ್‌ಪಾಯಿಂಟ್ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. 39 ವರ್ಷದ ತಾರಿಕ್ ಇದ್ರಿಸ್ ಎಂಬಾತ ಶುಕ್ರವಾರ ಉತ್ತರ ವೆಸ್ಟ್ ಬ್ಯಾಂಕ್ ನಗರವಾದ ನಬ್ಲಸ್‌ನಲ್ಲಿ ಇಸ್ರೇಲಿ ಸೇನೆಯ ದಾಳಿಯ ಗುಂಡೇಟಿನಿಂದ ಗಾಯಗೊಂಡು ಸಾವಿಗೀಡಾಗಿದ್ದಾನೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.