ಡಮಾಸ್ಕಸ್(ಸಿರಿಯಾ):ಉತ್ತರ ಸಿರಿಯಾದಲ್ಲಿ ಐಸಿಸ್ ಉಗ್ರರ ಅಟ್ಟಹಾಸಕ್ಕೆ 11 ಸೈನಿಕರು ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ. ಅಲ್ಲದೇ, ಮೂವರು ಯೋಧರು ಗಾಯಗೊಂಡಿದ್ದಾರೆ. ಬಸ್ ಮೇಲೆ ಉಗ್ರರು ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಉಗ್ರಗಾಮಿ ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ನಿಯಂತ್ರಿಸಲ್ಪಟ್ಟ ರಕ್ಕಾ ಪ್ರಾಂತ್ಯದಲ್ಲಿ ಈ ದಾಳಿ ಸಂಭವಿಸಿದೆ. ಯೋಧರು ಬಸ್ನಲ್ಲಿ ಸಂಚರಿಸುತ್ತಿದ್ದ ವೇಳೆ ಬಸ್ ಗುರಿಯಾಗಿಸಿ ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಬಸ್ ಬರುವುದನ್ನೇ ಕಾದು ಮಷಿನ್ ಗನ್‌ನಿಂದ ದಾಳಿ ಮಾಡಲಾಗಿದೆಯೇ ಅಥವಾ ಕ್ಷಿಪಣಿ ಬಳಸಿ ಉಡಾಯಿಸಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಈ ದಾಳಿಯ ಹಿಂದೆ ಐಸಿಸ್ ಉಗ್ರರ ಕೈವಾಡವಿದೆ ಎಂದು ಹೇಳಲಾಗ್ತಿದೆ. ಕಳೆದ ತಿಂಗಳು ಸಹ ಇದೇ ರೀತಿಯ ದಾಳಿ ನಡೆಸಿ ಜನರ ಪ್ರಾಣ ಹರಣ ಮಾಡಲಾಗಿತ್ತು.