ಲಾಹೋರ್: ಕೆಲವು ಧರ್ಮಗುರುಗಳ ಒತ್ತಾಯದ ಮೇರೆಗೆ ಪಾಕಿಸ್ತಾನ ಪೊಲೀಸರು ಪಂಜಾಬ್ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಅಹ್ಮದಿ ಸಮುದಾಯದ ಪೂಜಾ ಸ್ಥಳದ ಎರಡು ಮಿನಾರ್‌ಗಳನ್ನು ಕೆಡವಿದ್ದಾರೆ. ಅಹ್ಮದಿ ಸಮುದಾಯದ ಪ್ರತಿನಿಧಿಗಳ ಪ್ರಕಾರ, ಲಾಹೋರ್‌ನಿಂದ ಸುಮಾರು 80 ಕಿಮೀ ದೂರದಲ್ಲಿರುವ ಗುಜ್ರಾನ್‌ವಾಲಾದ ಬಾಗ್‌ಬಾನ್‌ಪುರ ಪ್ರದೇಶವನ್ನು ಡಿಸೆಂಬರ್ 8 ರಂದು ಸುತ್ತುವರಿದ ಪೊಲೀಸರು, ಅಹ್ಮದೀಯ ಪೂಜಾ ಸ್ಥಳದ ಮಿನಾರ್‌ಗಳನ್ನು ಕೆಡವಿದ್ದಾರೆ.
'ಮಿನಾರ್‌ಗಳನ್ನು ತಾವಾಗಿಯೇ ಕೆಡವದಿದ್ದಲ್ಲಿ ಅಹ್ಮದಿ ಪೂಜಾ ಸ್ಥಳದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಸ್ಥಳೀಯ ಧರ್ಮಗುರುಗಳ ಆದೇಶದಂತೆ ಪೊಲೀಸರು ವರ್ತಿಸಿದ್ದಾರೆ' ಎಂದು ಜಮಾತ್ ಅಹ್ಮದೀಯ ಪಂಜಾಬ್ ಸದಸ್ಯ ಅಮೀರ್ ಮಹಮೂದ್ ಸೋಮವಾರ ತಿಳಿಸಿದ್ದಾರೆ. ಅವರು ಹೇಳುವಂತೆ, ಪಾಕಿಸ್ತಾನದ ಕಾನೂನಿನ ಅಡಿಯಲ್ಲಿ ಅಹ್ಮದಿ ಸಮುದಾಯವು ಮಿನಾರ್‌ಗಳನ್ನು ನಿರ್ಮಿಸುವಂತಿಲ್ಲ ಮತ್ತು ಅವರ ಪೂಜಾ ಸ್ಥಳವನ್ನು ಮಸೀದಿ ಎಂದು ಕರೆಯುವಂತಿಲ್ಲ. ಇದರಿಂದಾಗಿ ಈ ಹಿಂದೆ, ಧಾರ್ಮಿಕ ಉಗ್ರಗಾಮಿಗಳ ಕೋಪವನ್ನು ತಪ್ಪಿಸಲು ಅಹ್ಮದಿಗಳು ಸಾರ್ವಜನಿಕರಿಂದ ಮಿನಾರ್‌ಗಳನ್ನು ಮರೆಮಾಚಲು ಅವುಗಳ ಸುತ್ತಲೂ ಸ್ಟೀಲ್ ಶೀಟ್‌ಗಳನ್ನು ಹಾಕಿದ್ದರು. ಆದರೂ ಕೆಲವು ಸ್ಥಳೀಯ ಧರ್ಮಗುರುಗಳು, ವಿಶೇಷವಾಗಿ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ (TLP)ಗೆ ಸೇರಿದವರು ಮಿನಾರ್‌ಗಳನ್ನು ತೆಗೆದುಹಾಕಲು ಒತ್ತಾಯಿಸಿದ ನಂತರ ಆಡಳಿತವು ಕಾರ್ಯರೂಪಕ್ಕೆ ಬಂದಿದೆ ಎಂದು ಹೇಳಿದ್ದಾರೆ.