ಪೆನ್ಸಿಲ್ವೇನಿಯಾ, ಅಮೆರಿಕ: ಅಮೆರಿಕದಾದ್ಯಂತ ವಾರಾಂತ್ಯದಲ್ಲಿ ನಡೆದ ಹಿಂಸಾಚಾರ ಮತ್ತು ಸಾಮೂಹಿಕ ಗುಂಡಿನ ದಾಳಿಯಲ್ಲಿ (Weekend Shootings) ಪೆನ್ಸಿಲ್ವೇನಿಯಾ ರಾಜ್ಯದ ಸೈನಿಕ ಸೇರಿದಂತೆ ಕನಿಷ್ಠ ಆರು ಜನರು ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿರುವುದರ ಬಗ್ಗೆ ವರದಿಯಾಗಿದೆ.
ಉಪನಗರ ಚಿಕಾಗೋ, ವಾಷಿಂಗ್ಟನ್ ಸ್ಟೇಟ್, ಪೆನ್ಸಿಲ್ವೇನಿಯಾ, ಸೇಂಟ್ ಲೂಯಿಸ್, ದಕ್ಷಿಣ ಕ್ಯಾಲಿಫೋರ್ನಿಯಾ ಮತ್ತು ಬಾಲ್ಟಿಮೋರ್‌ನಲ್ಲಿನ ಕಳೆದ ಹಲವಾರು ವರ್ಷಗಳಿಂದ ಗುಂಡಿನ ದಾಳಿಗಳು, ನರಹತ್ಯೆಗಳು ಮತ್ತು ಇತರ ಹಿಂಸಾಚಾರಗಳ ಹೆಚ್ಚಾಗಿ ಕಂಡು ಬರುತ್ತಿವೆ. ಇದು ಕೊರನಾ ವೈರಸ್ ಸಾಂಕ್ರಾಮಿಕ ಸಮಯದಿಂದ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ತಜ್ಞರ ಮಾತಾಗಿದೆ.
ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಸಾರ್ವಜನಿಕ ನೀತಿ ಮತ್ತು ಅಂಕಿ- ಅಂಶಗಳ ಪ್ರಾಧ್ಯಾಪಕ ಡೇನಿಯಲ್ ನಾಗಿನ್ ಪ್ರಕಾರ, ಈ ಪ್ರಕರಣಗಳಲ್ಲಿ ಕೆಲವು ಕೇವಲ ವಿವಾದಗಳಾಗಿ ಹಿಂಸಾಚಾರಗಳು ನಡೆದಿವೆ. ಸಾಮಾನ್ಯವಾಗಿ ಹದಿಹರೆಯದವರಲ್ಲಿ ಕಂಡುಬರುವ ವಿವಾದಗಳು ಮುಷ್ಟಿಯ ಬದಲಿಗೆ ಬಂದೂಕುಗಳಿಂದ ನಡೆದಿವೆ ಎಂದು ಹೇಳಿದರು.
ಹಿಂಸಾಚಾರ ಹೆಚ್ಚಳದ ಕಾರಣವನ್ನು ಸಂಶೋಧಕರು ಒಪ್ಪುತ್ತಿಲ್ಲ. ಅಮೆರಿಕದಲ್ಲಿ ಬಂದೂಕುಗಳ ವ್ಯಾಪಕತೆ ಅಥವಾ ಕಡಿಮೆ ಆಕ್ರಮಣಕಾರಿ ಪೊಲೀಸ್ ತಂತ್ರಗಳು ಅಥವಾ ದುಷ್ಕೃತ್ಯದ ಶಸ್ತ್ರಾಸ್ತ್ರ ಅಪರಾಧಗಳಿಗಾಗಿ ಕಾನೂನು ಕ್ರಮಗಳ ಕುಸಿತದಿಂದ ಹಿಂಸಾಚಾರ ನಡೆಯುತ್ತಿವೆ ಎಂದು ನಾಗಿನ್ ಅಭಿಪ್ರಾಯಪಟ್ಟಿದ್ದಾರೆ.
ವಾರಾಂತ್ಯದ ಹಿಂಸಾಚಾರ: ಈ ವಾರಾಂತ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 23 ಜನರ ಮೇಲೆ ಗುಂಡಿನ ದಾಳಿ ನಡೆದಿದೆ. ಭಾನುವಾರ ಮುಂಜಾನೆ . ಚಿಕಾಗೋದ ನೈಋತ್ಯಕ್ಕೆ ಸುಮಾರು 20 ಮೈಲುಗಳಷ್ಟು ದೂರದಲ್ಲಿರುವ ಇಲಿನಾಯ್ಸ್‌ನ ವಿಲ್ಲೋಬ್ರೂಕ್‌ನ ಪಾರ್ಕಿಂಗ್ ಸ್ಥಳವೊಂದರಲ್ಲಿ ನೂರಾರು ಜನರು ಜೂನ್‌ಟೀಂತ್ ಆಚರಿಸಲು ಜಮಾಯಿಸಿದ್ದರು. ಈ ವೇಳೆ, ಕೆಲವರು ಗುಂಡಿನ ದಾಳಿ ನಡೆಸಿದರು. ಡುಪೇಜ್ ಕೌಂಟಿ ಶೆರಿಫ್‌ನ ಕಚೇರಿಯಲ್ಲಿ ನಡೆಯುತ್ತಿದ್ದ ಶಾಂತಿಯುತ ಆಚರಣೆ ಇದ್ದಕ್ಕಿದ್ದಂತೆ ಹಿಂಸಾಚಾರಕ್ಕೆ ತಿರುಗಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿಕಾಗೋದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 15 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಇನ್ನು ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಸುತ್ತುವರಿದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು. ಗುಂಡಿನ ದಾಳಿಗೊಳಗಾದವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.
ದಾಳಿಯ ಉದ್ದೇಶ ತಿಳಿದು ಬಂದಿಲ್ಲ. ಅಧಿಕಾರಿಗಳು ನಡೆದ ಗುಂಡಿನ ದಾಳಿ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ನಾಲ್ಕು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವಾಷಿಂಗ್ಟನ್ನಲ್ಲಿ ಹಿಂಸಾಚಾರ:ಶನಿವಾರ ರಾತ್ರಿ ವಾಷಿಂಗ್ಟನ್ ಸ್ಟೇಟ್ ಕ್ಯಾಂಪ್‌ಗ್ರೌಂಡ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಬಿಯಾಂಡ್ ವಂಡರ್‌ಲ್ಯಾಂಡ್ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಫೆಸ್ಟಿವಲ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಕೈಗೊಂಡಿದ್ದ ಸ್ಥಳದಿಂದ ನೂರಾರು ಗಜಗಳಷ್ಟು ದೂರದಲ್ಲಿ ಸಂಗೀತ ಉತ್ಸವದಲ್ಲಿ ಭಾಗವಹಿಸಲು ನೂರಾರು ಜನರು ತಂಗಿದ್ದರು. ಈ ವೇಳೆ ಶೂಟರ್ವೊಬ್ಬ ಏಕಾಏಕಿ ಜನಸಂದಣಿಯ ಮೇಲೆ ಗುಂಡಿ ದಾಳಿ ನಡೆಸಿದ್ದಾನೆ.
ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದಾಡಾಯಿಸಿದ, ಗುಂಡಿನ ದಾಳಿ ನಡೆದ ಪ್ರದೇಶವನ್ನು ಸುತ್ತುವರಿದರು. ಬಳಿಕ ಅಧಿಕಾರಿಗಳೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಶಂಕಿತನನ್ನು ಹೊಡೆದುರುಳಿಸಲಾಯಿತು. ಭಾನುವಾರ ಬೆಳಗಿನ ಜಾವದವರೆಗೂ ಉತ್ಸವ ನಡೆಯಿತು ಎಂದು ಗ್ರ್ಯಾಂಟ್ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಕೈಲ್ ಫೋರ್ಮನ್ ಹೇಳಿದ್ದಾರೆ. ನಂತರ ಭಾನುವಾರದ ಸಂಗೀತ ಕಚೇರಿಯನ್ನು ರದ್ದುಗೊಳಿಸಲಾಗಿದೆ ಎಂದು ಸಂಘಟಕರು ಟ್ವೀಟ್ ಮಾಡಿದ್ದಾರೆ.
ಸೆಂಟ್ರಲ್ ಪೆನ್ಸಿಲ್ವೇನಿಯಾದಲ್ಲಿ ಗುಂಡಿನ ದಾಳಿ:ಶನಿವಾರ ಸೆಂಟ್ರಲ್ ಪೆನ್ಸಿಲ್ವೇನಿಯಾದಲ್ಲಿ ರಾಜ್ಯ ಪೊಲೀಸ್ ಬ್ಯಾರಕ್‌ಗಳ ಮೇಲೆ ಬಂದೂಕುಧಾರಿ ದಾಳಿ ಮಾಡಿದ್ದ. ಈ ದಾಳಿಯಲ್ಲಿ ರಾಜ್ಯದ ಸೈನಿಕನೊಬ್ಬ ಹುತಾತ್ಮರಾದರು. ಮತ್ತೊಬ್ಬ ಸೈನಿಕ ತೀವ್ರವಾಗಿ ಗಾಯಗೊಂಡಿರುವುದರ ಬಗ್ಗೆ ವರದಿಯಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಶಂಕಿತನು ತನ್ನ ಟ್ರಕ್ ಅನ್ನು ಲೆವಿಸ್‌ಟೌನ್ ಬ್ಯಾರಕ್‌ನ ಪಾರ್ಕಿಂಗ್ ಸ್ಥಳಕ್ಕೆ ನುಗ್ಗಿದ್ದಾನೆ. ಬಳಿಕ ದೊಡ್ಡ ಕ್ಯಾಲಿಬರ್ ರೈಫಲ್‌ನಿಂದ ಗುಂಡು ಹಾರಿಸಲು ಆರಂಭಿಸಿದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯಲ್ಲಿ 45 ವರ್ಷದ ಲೆಫ್ಟಿನೆಂಟ್ ಜೇಮ್ಸ್ ವ್ಯಾಗ್ನರ್ ತೀವ್ರವಾಗಿ ಗಾಯಗೊಂಡರೇ, ನಂತರ, 29 ವರ್ಷದ ಟ್ರೂಪರ್ ಜಾಕ್ವೆಸ್ ರೂಗೆ ಜೂನಿಯರ್ ಹುತಾತ್ಮರಾದರು. ಗುಂಡಿನ ಚಕಮಕಿಯ ನಂತರ 38 ವರ್ಷದ ಶಂಕಿತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಲೆಫ್ಟಿನೆಂಟ್ ಕರ್ನಲ್ ಜಾರ್ಜ್ ಬಿವೆನ್ಸ್ ಹೇಳಿದರು.
ಸೇಂಟ್ ಲೂಯಿಸ್ನಲ್ಲಿ ಶೂಟೌಟ್: ಡೌನ್‌ಟೌನ್ ಸೇಂಟ್ ಲೂಯಿಸ್ ಕಚೇರಿ ಕಟ್ಟಡದಲ್ಲಿ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ 17 ವರ್ಷದ ಬಾಲಕ ಮೃತಪಟ್ಟಿದ್ದು, ಇತರ ಒಂಬತ್ತು ಯುವಕರು ಗಾಯಗೊಂಡಿದ್ದಾರೆ ಎಂದು ನಗರದ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಸೇಂಟ್ ಲೂಯಿಸ್ ಮೆಟ್ರೋಪಾಲಿಟನ್ ಪೊಲೀಸ್ ಕಮಿಷನರ್ ರಾಬರ್ಟ್ ಟ್ರೇಸಿ ಹೇಳಿಕೆ ಪ್ರಕಾರ, ಮೃತ ಬಾಲಕನನ್ನು 17 ವರ್ಷದ ಮಕಾವೊ ಮೂರ್ ಎಂದು ಗುರುತಿಸಲಾಗಿದೆ. ಹ್ಯಾಂಡ್ಗನ್ ಹೊಂದಿದ್ದ ಬಾಲಕನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಭಾನುವಾರ ನಸುಕಿನ ಜಾವ 1 ಗಂಟೆ ಸುಮಾರಿಗೆ ನಡೆಯುತ್ತಿದ್ದ ಪಾರ್ಟಿಯಲ್ಲಿ ಗುಂಡಿನ ದಾಳಿ ನಡೆದಿದೆ. ಪಾರ್ಟಿಯಲ್ಲಿ ಸುಮಾರು 15 ರಿಂದ 19 ವರ್ಷ ವಯಸ್ಸಿನವರು ಭಾಗಿಯಾಗಿದ್ದು, ಅನೇಕರಿಗೆ ಗುಂಡೇಟು ಬಿದ್ದಿವೆ. ಅಷ್ಟೇ ಅಲ್ಲ ಗುಂಡಿನ ದಾಳಿ ನಡೆದ ಬಳಿಕ 17 ವರ್ಷದ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ, ಕೆಲವರು ಓಡಿ ಹೋಗುವ ಬರದಲ್ಲಿ ಆಕೆಯನ್ನು ತುಳಿದಿದ್ದಾರೆ. ಹೀಗಾಗಿ ಆಕೆಯ ಬೆನ್ನುಮೂಳೆಗೆ ಗಂಭೀರವಾಗಿ ಗಾಯವಾಗಿದೆ ಎಂದು ಟ್ರೇಸಿ ಹೇಳಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹಿಂಸಾಚಾರ: ದಕ್ಷಿಣ ಕ್ಯಾಲಿಫೋರ್ನಿಯಾದ ಮನೆಯೊಂದರಲ್ಲಿ ನಡೆಯುತ್ತಿದ್ದ ಪೂಲ್ ಪಾರ್ಟಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಎಂಟು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗಾಯಗೊಂಡವರು 16 ರಿಂದ 24 ವರ್ಷ ವಯಸ್ಸಿನವರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
ಬಾಲ್ಟಿಮೋರ್‌ನಲ್ಲಿ ಶೂಟೌಟ್:ಬಾಲ್ಟಿಮೋರ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಹಲವಾರು ಗುಂಡೇಟಿನ ಗಾಯಗಳಿಂದ ಬಳಲುತ್ತಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಾಳುಗಳು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ಬಾಲ್ಟಿಮೋರ್ ಪೊಲೀಸ್ ಇಲಾಖೆಯ ವಕ್ತಾರ ಲಿಂಡ್ಸೆ ಎಲ್ಡ್ರಿಡ್ಜ್ ಹೇಳಿದ್ದಾರೆ.
ಓದಿ:ಸೆಕ್ವಾಚಿಯ ಮನೆಯೊಂದರಲ್ಲಿ 6 ಮಂದಿ ಶವ ಪತ್ತೆ: ಗುಂಡೇಟಿನಿಂದ ಸಾವು, ಮನೆಗೂ ಬೆಂಕಿ