ವಾಷಿಂಗ್ಟನ್: ಅಮೆರಿಕದಲ್ಲಿ ಭಾರಿ ದುರಂತ ಘಟನೆಯೊಂದು ಸಂಭವಿಸಿದೆ. ಟೆಕ್ಸಾಸ್ ರಾಜ್ಯದ ಸ್ಯಾನ್ ಆಂಟೋನಿಯೊದಲ್ಲಿ ಸೋಮವಾರ ಟ್ರಾಕ್ಟರ್ ಟ್ರೈಲರ್‌ನಲ್ಲಿ ಕನಿಷ್ಠ 46 ಜನರ ಮೃತದೇಹಗಳು ಪತ್ತೆಯಾಗಿದ್ದು, ಪೊಲೀಸರು ಹೈ -ಅಲರ್ಟ್ ಆಗಿದ್ದಾರೆ. ನಗರದ ಹೊರವಲಯದಲ್ಲಿರುವ ರೈಲು ಹಳಿಗಳ ಬಳಿ ಟ್ರಕ್ ಪತ್ತೆಯಾಗಿದೆ ಎಂದು ಸ್ಯಾನ್ ಆಂಟೋನಿಯೊದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಸ್ಯಾನ್ ಆಂಟೋನಿಯೊ ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ.
ಮಾಧ್ಯಮವೊಂದರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳಲ್ಲಿ ಪೊಲೀಸ್ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳು ದೊಡ್ಡ ಟ್ರಕ್ ಅನ್ನು ಸುತ್ತುವರೆದಿರುವುದು ಕಂಡು ಬರುತ್ತದೆ. ಈ ಟ್ರಕ್ ಪತ್ತೆಯಾದ ಸ್ಥಳವು ಯುಎಸ್ ಮತ್ತು ಮೆಕ್ಸಿಕೋ ಗಡಿಯಿಂದ 250 ಕಿ.ಮೀ ದೂರದಲ್ಲಿರುವ ಕಾರಣ ಇದು ಅಕ್ರಮವಾಗಿ ಯುಎಸ್ ಪ್ರವೇಶಿಸಿದ ಪ್ರಕರಣ ಎಂದು ನಂಬಲಾಗಿದೆ. ಟ್ರಕ್‌ನಲ್ಲಿ ಸತ್ತವರು ವಲಸಿಗರು ಎಂದು ಸಿಟಿ ಕೌನ್ಸಿಲ್ ಮುಖ್ಯಸ್ಥ ಆಡ್ರಿಯಾನಾ ರೋಚಾ ಗಾರ್ಸಿಯಾ ಹೇಳಿದ್ದಾರೆ.
ಓದಿ:ಗನ್ ಜೊತೆ ಆಟವಾಡುತ್ತಾ 1, 2 ವರ್ಷದ ಕಂದಮ್ಮಗಳಿಗೆ ಗುಂಡು ಹಾರಿಸಿದ 8ರ ಬಾಲಕ.. ಒಂದು ಮಗು ಸಾವು, ಮೊತ್ತೊಂದು ಗಂಭೀರ!
ಸ್ಯಾನ್ ಆಂಟೋನಿಯೊ ಅಗ್ನಿಶಾಮಕ ಇಲಾಖೆಯ ಪ್ರಕಾರ, ಸೋಮವಾರ ರಾತ್ರಿ ಇತರ 16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ವರು ಅಪ್ರಾಪ್ತರು ಸೇರಿದ್ದಾರೆ. ಹೀಟ್ ಸ್ಟ್ರೋಕ್ನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ವಲಸಿಗರನ್ನು ಮೆಥೋಡಿಸ್ಟ್ ಮೆಟ್ರೋಪಾಲಿಟನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಅವರೆಲ್ಲರೂ ಮುಚ್ಚಿದ ಟ್ರಕ್‌ನೊಳಗೆ ಕುಳಿತಿದ್ದರು ಮತ್ತು ಅತೀಯಾದ ಶಾಖ ಮತ್ತು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಟೆಕ್ಸಾಸ್‌ನಲ್ಲಿ ಸೋಮವಾರ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಈ ಪ್ರಕರಣದಲ್ಲಿ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮೆಕ್ಸಿಕೋ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವೀಟ್ ಮಾಡುವ ಮೂಲಕ, ಅವರು ಇದು ಟೆಕ್ಸಾಕ್‌ನ ದುರಂತ ಎಂದು ಬಣ್ಣಿಸಿದ್ದಾರೆ. ಸ್ಥಳೀಯ ರಕ್ಷಣಾ ಪಡೆ ಸ್ಥಳಕ್ಕೆ ತಲುಪುತ್ತಿದೆ. ಮೃತರೆಲ್ಲರ ರಾಷ್ಟ್ರೀಯತೆ ದೃಢಪಟ್ಟಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ ದಾಖಲೆ ಸಂಖ್ಯೆಯ ವಲಸಿಗರು US-ಮೆಕ್ಸಿಕೋ ಗಡಿಯನ್ನು ದಾಟಿದ್ದಾರೆ. ಈ ಹಿನ್ನೆಲೆ ಜೋ ಬೈಡೆನ್ ಸರ್ಕಾರದ ವಲಸೆ ನೀತಿಯನ್ನು ಟೀಕಿಸಲಾಗುತ್ತಿದೆ.