ಟೆಲ್ ಅವಿವ್ (ಇಸ್ರೇಲ್): ಪ್ಯಾಲೆಸ್ಟೀನ್ ಉಗ್ರಗಾಮಿ ಪಡೆಯ ಹಮಾಸ್ ದಾಳಿಗೆ ಇಸ್ರೇಲ್ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ ಈವರೆಗೆ 400ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಹಮಾಸ್ ನಾಯಕರನ್ನೂ ಇಸ್ರೇಲ್ ರಕ್ಷಣಾ ಪಡೆ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಎರಡೂ ಕಡೆಗಳಲ್ಲಿ ಈವರೆಗೆ 1,100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇಸ್ರೇಲ್ ತನ್ನ ಮೇಲಿನ ದಾಳಿಗೆ ಪ್ರತೀಕಾರವಾಗಿ ಹಲವು ಪ್ರದೇಶಗಳಲ್ಲಿ ಹಮಾಸ್ ಉಗ್ರಗಾಮಿಗಳೊಂದಿಗೆ ಗುಂಡಿನ ಕಾಳಗದಲ್ಲಿ ತೊಡಗಿದೆ. ಗಾಜಾ ಪಟ್ಟಿ ಮೇಲೂ ಇಸ್ರೇಲ್ ರಕ್ಷಣಾ ಪಡೆ ದಾಳಿ ಮಾಡಿದೆ. 24 ಗಂಟೆಗಳ ಬಳಿಕವೂ ಇಂದು ಬೆಳಗ್ಗೆ ಕೂಡ ಹಲವಾರು ಸ್ಥಳಗಳಲ್ಲಿ ಇಸ್ರೇಲ್ ಪಡೆಗಳು ಪ್ಯಾಲೆಸ್ಟೀನ್ ಉಗ್ರಗಾಮಿಗಳ ಜೊತೆ ಸೆಣಸಾಡುತ್ತಿದೆ.
"ಹಮಾಸ್ ಉಗ್ರಗಾಮಿಗಳು ತಮ್ಮ ದಾಳಿಯಲ್ಲಿ ಮೊದಲು ಪ್ರವೇಶಿಸಿದ ಎರಡು ಕಿಬ್ಬುತ್ಜಿಮ್ ಸೇರಿದಂತೆ ನಾಲ್ಕು ಸೈಟ್‌ಗಳ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ವಿಶೇಷ ಪಡೆಗಳನ್ನು ಕರೆತಂದಿದೆ" ಎಂದು ಇಸ್ರೇಲ್ ಹೇಳಿದೆ.
ಶನಿವಾರ ಬೆಳಗ್ಗೆ 6:30ರ ಸುಮಾರಿಗೆ ಇಸ್ರೇಲ್ ಮೇಲೆ ಹಮಾಸ್ ಉಗ್ರಗಾಮಿಗಳು ಹಠಾತ್ ದಾಳಿ ಮಾಡಿದ್ದರು. ಇಸ್ರೇಲ್ನತ್ತ ಸಾವಿರಾರು ರಾಕೆಟ್ಗಳನ್ನು ಉಡಾಯಿಸಿದ್ದರು. ಬಂಧೂಕುದಾರಿ ಭಯೋತ್ಪಾದಕರು ವಾಯು, ಸಮುದ್ರ ಮತ್ತು ಭೂಮಾರ್ಗಗಳಿಂದ ಇಸ್ರೋಲ್ನೊಳಗೆ ಪ್ರವೇಶಿಸಿದ್ದರು. ನಾಗರಿಕರ ಮೇಲೆ ಗುಂಡು ಹಾರಿಸಿ ಅವರನ್ನು ಒತ್ತೆಯಾಳಾಗಿಸಿಕೊಂಡಿದ್ದರು. ಜನರು ತನ್ನ ಜೀವಗಳನ್ನು ಉಳಿಸಿಕೊಳ್ಳಲು ಹೆದರಿ ಓಡಿ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದರು.
ಇಸ್ರೇಲ್ ತನ್ನ 75 ವರ್ಷಗಳ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ದಾಳಿಗೆ ತುತ್ತಾಗಿ ಹೋಗಿದೆ. ಹೆಚ್ಚಾಗಿ ಬಡವರೇ ವಾಸಿಸುವ ಮತ್ತು ಜನ ನಿಬಿಡವಾಗಿರುವ ಗಾಜಾ ಪಟ್ಟಿಯನ್ನು ನಿಯಂತ್ರಿಸುವ ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಮಾಸ್ನ ದಾಳಿಕೋರರ ಹಠಾತ್ ದಾಳಿಗೆ ನಲುಗಿದ ಇಸ್ರೇಲ್ನಲ್ಲಿ ಈವರೆಗೆ 700 ಮಂದಿ ಮೃತಪಟ್ಟಿದ್ದಾರೆ.
ಅಲ್ಲದೇ, ಅನೇಕ ಇಸ್ರೇಲ್ ನಾಗರಿಕರು ಹಾಗೂ ಸೇನಾ ಸಿಬ್ಬಂದಿ ಸೇರಿ 130ಕ್ಕೂ ಹೆಚ್ಚು ಜನರನ್ನು ಹಮಾಸ್ ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಬಂಧಿತರಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ವಯಸ್ಕರೇ ಹೆಚ್ಚು ಎಂದು ತಿಳಿದು ಬಂದಿದೆ. ಬಂಧಿತರ ಸಂಖ್ಯೆ ಜಾಸ್ತಿಯಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಇದನ್ನೂ ಓದಿ:ಇಸ್ರೇಲ್-ಹಮಾಸ್ ಯುದ್ಧ; ಭಾರತದ ಆರ್ಥಿಕತೆಯ ಮೇಲಾಗುವ ಪರಿಣಾಮವೇನು?
ಹಮಾಸ್ ಪಟ್ಟಣವನ್ನು ದಾಳಿಗೆ ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ. ಸಾವು ನೋವುಗಳ ಬಗ್ಗೆ ತಕ್ಷಣದ ಮಾಹಿತಿ ಸಿಕ್ಕಿಲ್ಲ. ಏಕೆಂದರೆ, ಹತ್ತಾರು ಸಾವಿರ ಜನರು ಮೊದಲೇ ಇಲ್ಲಿಂದ ಬೇರೆಡೆಗೆ ಪಲಾಯನ ಮಾಡಿರುವ ಸಾಧ್ಯತೆ ಇದೆ. ಹಮಾಸ್ ಯಾವ ರೀತಿಯಾಗಿ ನಮ್ಮ ಮೇಲೆ ದಾಳಿ ಮಾಡಿತೋ, ಅದೇ ರೀತಿಯಾಗಿ ನಾವು ಕೂಡ ನಿರಂತರವಾಗಿ ದಾಳಿ ನಡೆಸುತ್ತೇವೆ ಎಂದು ಇಸ್ರೇಲ್ ರಿಯಲ್ ಅಡ್ಮ್. ಡೇನಿಯಲ್ ಹಗರಿ ಹೇಳಿದರು.
ಇಸ್ರೇಲ್ ಸೇನೆಯು ಗಾಜಾಕ್ಕೆ ಸಮೀಪವಿರುವ 5 ಪಟ್ಟಣಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದೆ. ಕಾಣೆಯಾಗಿರುವ ಕುಟುಂಬ ಸದಸ್ಯರನ್ನು ಗುರುತಿಸಲು ಸಹಾಯ ಮಾಡುವ ಡಿಎನ್ಎ ಸ್ಯಾಂಪಲ್ಸ್ ಮತ್ತು ಇತರ ಮಾಹಿತಿಗಳನ್ನು ಹಿಡಿದುಕೊಂಡು ಜನರು ಕೇಂದ್ರ ಇಸ್ರೇಲ್ ಪೊಲೀಸ್ ಠಾಣೆಯ ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಪ್ಯಾಲೆಸ್ಟೀನ್ ಉಗ್ರಗಾಮಿಗಳ ಕಪಿಮುಷ್ಟಿಯಲ್ಲಿರುವ ಇಸ್ರೇಲಿಗರನ್ನು ಕರೆತರಲು ಸೇನೆಯು ಭಾರಿ ಪ್ರಯತ್ನವನ್ನು ನಡೆಸುತ್ತಿದೆ.
ಹಮಾಸ್ ದಾಳಿ ಕುರಿತು ಶನಿವಾರ ತಮ್ಮ ದೇಶವನ್ನುದ್ದೇಶಿಸಿ ಮಾತನಾಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ನಾವು ಯುದ್ಧದಲ್ಲಿ ತೊಡಗಿದ್ದೇವೆ. ಶತ್ರುಗಳು ಹಿಂದೆಂದೂ ಕಂಡಿರದ ಬೆಲೆ ತೆರಲಿದ್ದಾರೆ. ಈ ಯುದ್ಧದ ನಾವು ಗೆಲ್ಲುತ್ತೇವೆ" ಎಂದು ಹೇಳಿದ್ದರು. ಮತ್ತೊಂದೆಡೆ, ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಕೂಡ ಹಮಾಸ್ ಉಗ್ರಗಾಮಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುವ ಮೂಲಕ ಹಮಾಸ್ 'ಘೋರ ತಪ್ಪು'' ಮಾಡಿದೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ:ಇಸ್ರೇಲ್ - ಪ್ಯಾಲೆಸ್ಟೇನ್ ಸಂಘರ್ಷ : ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದ ಸರ್ಕಾರ