ಫಾರ್ಮಿಂಗ್ಟನ್(ಅಮೆರಿಕ): ವಾಯುವ್ಯ ನ್ಯೂ ಮೆಕ್ಸಿಕೊದಲ್ಲಿ ಸೋಮವಾರ ಭೀಕರ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಸಾರ್ವಜನಿಕರಷ್ಟೇ ಅಲ್ಲ ಈ ದಾಳಿಯಲ್ಲಿ ಪೊಲೀಸರು ಕೂಡಾ ಗಾಯಗೊಂಡಿದ್ದಾರೆ. ಈ ನಡುವೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ದುಷ್ಕರ್ಮಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.
ಸುಮಾರು 50,000 ಜನರಿರುವ ನಗರವಾದ ಫಾರ್ಮಿಂಗ್‌ಟನ್‌ನಲ್ಲಿ ಬೆಳಗ್ಗೆ 11 ಗಂಟೆ ವೇಳೆ ದುಷ್ಕರ್ಮಿಯೊಬ್ಬ ಗುಂಡಿನ ಮಳೆಗರೆದಿದ್ದಾನೆ. ನಗರದ ಪೊಲೀಸ್ ಇಲಾಖೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕನಿಷ್ಠ ಮೂವರು ಸಾರ್ವಜನಿಕರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿ ಬಂದಿದ್ದು, ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಪ್ರತಿದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಈ ದಾಳಿ ವೇಳೆ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರೆಲ್ಲ ಆರೋಗ್ಯವಾಗಿದ್ದಾರೆ ಎಂದು ನ್ಯೂ ಮೆಕ್ಸಿಕೋ ಪೊಲೀಸರು ಮಾಹಿತಿ ನೀಡಿದ್ದಾರೆ.
"ಶಂಕಿತ ದುಷ್ಕರ್ಮಿಯ ಗುರುತು ಗೊತ್ತಾಗಿಲ್ಲ ಈ ವ್ಯಕ್ತಿ ದಾಳಿ ಮಾಡಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಇನ್ನು ಹತ್ಯೆಗೀಡಾದ ಅಥವಾ ಗಾಯಗೊಂಡವರ ಹೆಸರನ್ನು ಪೊಲೀಸರು ಬಿಡುಗಡೆ ಮಾಡಿಲ್ಲ. ಗುಂಡಿನ ದಾಳಿಗೆ ಕಾರಣವಾದ ಬಗ್ಗೆ ಇನ್ನೂ ವಿವರಗಳು ಲಭ್ಯವಾಗಿಲ್ಲ.
ದಾಳಿ ಬಗ್ಗೆ ಶಾಲಾ ಶಿಕ್ಷಕ ನಿಕ್ ಅಕಿನ್ಸ್ ಮಾತನಾಡಿದ್ದು, ದಾಳಿ ನಡೆದ ಸ್ಥಳ ಶಾಲೆ ಇರುವ ಪ್ರದೇಶವಾಗಿದೆ. ಇಲ್ಲಿ ಅಪಾರ್ಟ್ಮೆಂಟ್ಗಳು ಸೇರಿದಂತೆ ಜನನಿಬಿಡ ಪ್ರದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.