ರಮಾಲ್ಲಾಹ (ಪ್ಯಾಲೆಸ್ಟೀನ್): ಪ್ಯಾಲೆಸ್ಟೀನ್ ಉಗ್ರಗಾಮಿ ಪಡೆಯ ಹಮಾಸ್ ದಾಳಿಗೆ ಇಸ್ರೇಲ್ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ ಸುಮಾರು 232 ಪ್ಯಾಲೆಸ್ಟೀನಿಯನ್ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಹಮಾಸ್ ನಾಯಕರನ್ನೂ ಇಸ್ರೇಲ್ ರಕ್ಷಣಾ ಪಡೆ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.
ಶನಿವಾರ ಬೆಳಗ್ಗೆ 6:30ರ ಸುಮಾರಿಗೆ ಇಸ್ರೇಲ್ ಮೇಲೆ ಹಮಾಸ್ ಉಗ್ರಗಾಮಿಗಳು ಹಠಾತ್ ದಾಳಿ ಮಾಡಿದ್ದಾರೆ. ಇಸ್ರೇಲ್ನತ್ತ ಸಾವಿರಾರು ರಾಕೆಟ್ಗಳನ್ನು ಉಡಾಯಿಸಿದ್ದಾರೆ. ವಾಯು, ಭೂ, ಸಮುದ್ರ ಮೂಲಕ ಉಗ್ರರು ಒಳಸುಳಿಸಿದ್ದಾರೆ. ಇದರ ಪರಿಣಾಮ ಅಂದಾಜು 300 ಇಸ್ರೇಲಿಗಳು ಮೃತಪಟ್ಟಿದ್ದಾರೆ. ಇತ್ತೀಚಿನ ವರ್ಷಗಳ ನಡೆದ ರಕ್ತಪಾತದ ದಾಳಿ ಇದಾಗಿದೆ ಎಂದು ಇಸ್ರೇಲ್ನ ರಾಷ್ಟ್ರೀಯ ರಕ್ಷಣಾ ಸೇವೆಗಳ ಇಲಾಖೆ ಹೇಳಿದೆ.
ಇದನ್ನೂ ಓದಿ:ಇಸ್ರೇಲ್ ಮೇಲೆ ಹಮಾಸ್ ಉಗ್ರರ ಅಟ್ಟಹಾಸ: ಮೃತರ ಸಂಖ್ಯೆ 300ಕ್ಕೆ ಏರಿಕೆ
ಅಲ್ಲದೇ, ಅನೇಕ ಇಸ್ರೇಲ್ ನಾಗರಿಕರು ಹಾಗೂ ಸೇನಾ ಸಿಬ್ಬಂದಿಯನ್ನು ಹಮಾಸ್ ಭಯೋತ್ಪಾದಕರು ಗಾಜಾಕ್ಕೆ ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೆ ಇಸ್ರೇಲ್ ಕೂಡ ಪ್ರತಿದಾಳಿಯನ್ನು ಮುಂದುವರೆಸಿದೆ. ತನ್ನ ಮೇಲಿನ ದಾಳಿಗೆ ಪ್ರತೀಕಾರವಾಗಿ ಹಲವು ಪ್ರದೇಶಗಳಲ್ಲಿ ಹಮಾಸ್ ಉಗ್ರಗಾಮಿಗಳೊಂದಿಗೆ ಗುಂಡಿನ ಕಾಳಗದಲ್ಲಿ ಇಸ್ರೇಲ್ ತೊಡಗಿದೆ. ಗಾಜಾ ಪಟ್ಟಿ ಮೇಲೂ ಇಸ್ರೇಲ್ ರಕ್ಷಣಾ ಪಡೆ ದಾಳಿ ಮಾಡಿದೆ.
ಹಮಾಸ್ನ ನಾಯಕ ಮನೆ ಹೊಕ್ಕ ಫೈಟರ್ ಜೆಟ್ಗಳು: ಗಾಜಾದಲ್ಲಿರುವ ಹಮಾಸ್ ಉಗ್ರಗಾಮಿ ಸಂಘಟನೆಯ ನಾಯಕ ಮನೆಗೆ ಇಸ್ರೇಲ್ ಫೈಟರ್ ಜೆಟ್ಗಳು ಹೊಕ್ಕಿವೆ. ಈ ಮನೆಯಲ್ಲಿದ್ದ ಸೇನೆ ವ್ಯವಸ್ಥೆಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.
'ಇತ್ತೀಚೆಗೆ ಫೈಟರ್ ಜೆಟ್ಗಳು ಭಯೋತ್ಪಾದಕ ಸಂಘಟನೆ ಹಮಾಸ್ನ ಗುಪ್ತಚರ ವಿಭಾಗದ ಮುಖ್ಯಸ್ಥರ ಮನೆಯಲ್ಲಿರುವ ಸೇನೆ ಮೂಲಸೌಕರ್ಯದ ಮೇಲೆ ದಾಳಿ ನಡೆಸಿವೆ. ಇದೇ ಸಮಯದಲ್ಲಿ ಗಾಜಾ ಪಟ್ಟಿಯಾದ್ಯಂತ ಇಸ್ರೇಲ್ ರಕ್ಷಣಾ ಪಡೆಯು ತನ್ನ ದಾಳಿಯನ್ನು ಮುಂದುವರೆಸಿದೆ' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ರಕ್ಷಣಾ ಪಡೆ ಪೋಸ್ಟ್ ಮಾಡಿದೆ.
ಇದನ್ನೂ ಓದಿ:ಇಸ್ರೇಲ್-ಪ್ಯಾಲೆಸ್ಟೀನ್ ನಡುವೆ ಭುಗಿಲೆದ್ದ ಯುದ್ಧ: ಭಾರತೀಯರು ಜಾಗರೂಕರಾಗಿರಲು ರಾಯಭಾರಿ ಕಚೇರಿ ಸೂಚನೆ
ಹಮಾಸ್ ದಾಳಿ ಕುರಿತು ಶನಿವಾರ ತಮ್ಮ ದೇಶವನ್ನುದ್ದೇಶಿಸಿ ಮಾತನಾಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ನಾವು ಯುದ್ಧದಲ್ಲಿ ತೊಡಗಿದ್ದೇವೆ. ಶತ್ರುಗಳು ಹಿಂದೆಂದೂ ಕಂಡಿರದ ಬೆಲೆ ತೆರಲಿದ್ದಾರೆ. ಈ ಯುದ್ಧದ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಇಸ್ರೇಲ್ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಕೂಡ ಹಮಾಸ್ ಉಗ್ರಗಾಮಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುವ ಮೂಲಕ ಹಮಾಸ್ 'ಘೋರ ತಪ್ಪು'' ಮಾಡಿದೆ" ಎಂದು ಗುಡುಗಿದ್ದಾರೆ.
ಇದನ್ನೂ ಓದಿ:ಇಸ್ರೇಲ್ ಮೇಲೆ ಹಮಾಸ್ ಉಗ್ರರಿಗೇಕೆ ಇಷ್ಟೊಂದು ದ್ವೇಷ? ಸಂಘರ್ಷದ ಹಿಂದಿನ ಕಹಾನಿ..