ಕೊನಾಕ್ರಿ (ಗಿನಿಯಾ):ಆಫ್ರಿಕನ್ ದೇಶವಾದ ಗಿನಿಯಾದ ರಾಜಧಾನಿ ಕೊನಾಕ್ರಿಯಲ್ಲಿ ಬೃಹತ್ ತೈಲ ಟರ್ಮಿನಲ್ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದು, 178 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ದುರಂತದ ಹಿನ್ನೆಲೆ ಪಶ್ಚಿಮ ಆಫ್ರಿಕಾದ ದೇಶಕ್ಕೆ ಇತರ ರಾಷ್ಟ್ರಗಳು ನೆರವಿನ ಹಸ್ತಚಾಚಿವೆ.
ಭಾನುವಾರ ಮಧ್ಯರಾತ್ರಿಯ ನಂತರ ಗಿನಿಯನ್ ಪೆಟ್ರೋಲಿಯಂ ಕಂಪನಿಯ ಟರ್ಮಿನಲ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಗಿನಿಯಾ ಪ್ರೆಸಿಡೆನ್ಸಿ ತಿಳಿಸಿದೆ. ಸ್ಫೋಟದಿಂದ ಕಲೂಮ್ ಜಿಲ್ಲೆಯ ಹೃದಯಭಾಗದಲ್ಲಿ ತುಂಬಾ ಹಾನಿ ಉಂಟಾಗಿದೆ. ಈ ಭಾಗದಲ್ಲಿ ಸರ್ಕಾರಿ ಕಚೇರಿಗಳು ಹೆಚ್ಚಿವೆ. ಗಾಯಗೊಂಡ 178 ಜನರಲ್ಲಿ ಕನಿಷ್ಠ 89 ಜನರು ಚಿಕಿತ್ಸೆ ಪಡೆದು ಡಿಶ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಹತ್ಯೆಗೀಡಾದ 13 ಜನರಲ್ಲಿ ವಿದೇಶಿಯರು ಸೇರಿದ್ದಾರೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗಿನಿಯಾದಲ್ಲಿ ಹೆಚ್ಚಿನ ಇಂಧನವನ್ನು ಪೂರೈಸುವ ಟರ್ಮಿನಲ್ನಲ್ಲಿ ನಡೆದಿರುವ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಲು ತನಿಖೆ ಪ್ರಾರಂಭವಾಗಿದೆ. ಇಂತಹ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಈ ಟರ್ಮಿನಲ್ ಅನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ. ದೇಶವು ಆಮದು ಮಾಡಿಕೊಳ್ಳುವ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದೆ. ಈ ಟರ್ಮಿನಲ್ನಿಂದ ತೈಲ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಗಿನಿಯಾ ರಾಜಧಾನಿಯಿಂದ ದೇಶದ ಇತರ ಭಾಗಗಳಿಗೆ ಸರಬರಾಜಿನಲ್ಲಿ ಸಂಭವನೀಯ ಅಡಚಣೆಗಳನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಗುರುತಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಸ್ಫೋಟದ ಬಗ್ಗೆ ಕಾರ್ಮಿಕರ ಮಾತು:''ಹಡಗಿನ ಮೂಲಕ ತೈಲವನ್ನು ಸಾಗಿಸುವ ಸಮಯದಲ್ಲಿ ಸ್ಫೋಟ ಸಂಭವಿಸಿದೆ'' ಎಂದು ಟರ್ಮಿನಲ್ನಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರು ಮಾಧ್ಯಮಯೊಂದಕ್ಕೆ ತಿಳಿಸಿದ್ದಾರೆ. ''ಈ ಬೆಂಕಿ ಅವಘಡದಲ್ಲಿ ನನ್ನ ಹಲವಾರು ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ನನ್ನಂತೆ ಕೆಲವರು ಕಾರ್ಮಿಕರು, ಇನ್ನು ಕೆಲವರು ತಂತ್ರಜ್ಞರು ಹಾಗೂ ಎಲ್ಲಾ ಕಚೇರಿಗಳು, ಉಪಕರಣಗಳು ನಾಶವಾಗಿವೆ'' ಎಂದು ಕಾರ್ಮಿಕ ಅಹ್ಮದ್ ಕಾಂಡೆ ಹೇಳಿದ್ದಾರೆ.