ವಾರ್ಸಾ(ಪೋಲೆಂಡ್): ನಾಜಿಗಳಿಂದ ನಿರ್ದಯವಾಗಿ ಕೊಲ್ಲಲ್ಪಟ್ಟ ಕನಿಷ್ಠ 8,000ಕ್ಕೂ ಹೆಚ್ಚು ಮಂದಿಯ ಎರಡು ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ ಎಂದು ಪೋಲೆಂಡ್‌ನ ವಿಶೇಷ ತನಿಖಾಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಐತಿಹಾಸಿಕ ಸಂಸ್ಥೆಯ ತನಿಖಾಧಿಕಾರಿಗಳು ವಾರ್ಸಾದಿಂದ ಉತ್ತರಕ್ಕೆ 160 ಕಿಲೋಮೀಟರ್ ದೂರದಲ್ಲಿರುವ ಬಿಯಾಲುಟಿ ಕಾಡಿನ ಡಿಜಿಯಾಲ್ಡೋವೊ ಎಂದು ಕರೆಯಲ್ಪಡುವ ಸೋಲ್ಡೌ ಕಾನ್ಸಂಟ್ರೇಶನ್ ಕ್ಯಾಂಪ್ ಬಳಿ ವಾರದಿಂದ ಶೋಧ ನಡೆಸಿ ಈ ಸ್ಥಳ ಪತ್ತೆ ಹಚ್ಚಿದ್ದಾರೆ.
ಪೋಲೆಂಡ್‌ನಲ್ಲಿ ಜರ್ಮನಿಯ ನಾಜಿಗಳ ಭೀಕರ ಆಕ್ರಮಣ ಮತ್ತು ಕಮ್ಯುನಿಸ್ಟ್ ಯುಗದಲ್ಲಿ ಮಾಡಿದ ಅಪರಾಧಗಳನ್ನು ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ರಿಮೆಂಬರೆನ್ಸ್ ತನಿಖೆ ಮಾಡುತ್ತಿದೆ. 2ನೇ ವಿಶ್ವ ಯುದ್ಧದ ಸಮಯದಲ್ಲಿ ನಾಜಿಗಳು ಪೋಲೆಂಡ್ ಅನ್ನು ವಶಪಡಿಸಿಕೊಂಡಾಗ ಇಲ್ಲಿ ನಾಜಿ ಜರ್ಮನಿ ಶಿಬಿರಗಳನ್ನು ನಿರ್ಮಿಸಲಾಗಿತ್ತು. ಈ ಶಿಬಿರದಲ್ಲಿ ಯಹೂದಿಗಳು, ರಾಜಕೀಯ ವಿರೋಧಿಗಳು, ಮಿಲಿಟರಿ ಮತ್ತು ಪೋಲಿಷ್ ರಾಜಕೀಯ ಗಣ್ಯರು ಸೇರಿ ಅಂದಾಜು 30,000 ಜನ ಕೈದಿಗಳಾಗಿದ್ದರು. ಆದ್ರೆ ಅವರನ್ನು ಎಲ್ಲಿ ಸಮಾಧಿ ಮಾಡಲಾಗಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.