ಇಸ್ಲಾಮಾಬಾದ್:ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿನ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸರ್ಕಾರಗಳು ಡಿಸೆಂಬರ್ 23 ರಂದು ತಮ್ಮ ಅಸೆಂಬ್ಲಿಗಳನ್ನು ವಿಸರ್ಜಿಸಿ ಹೊಸ ಚುನಾವಣೆಗೆ ದಾರಿ ಮಾಡಿಕೊಡಲಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನ ದೇಶ ವಿನಾಶದಂಚಿನಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
ಎಲ್ಲಿಯವರೆಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯುವುದಿಲ್ಲವೋ ಅಲ್ಲಿಯವರೆಗೆ ದೇಶವು (ಪಾಕಿಸ್ತಾನ) ವಿನಾಶವಾಗಲಿದೆ ಎಂಬ ಭಯ ಕಾಡುತ್ತಿರುತ್ತದೆ ಎಂದು ಪಿಟಿಐ ಅಧ್ಯಕ್ಷ ಖಾನ್ ಹೇಳಿದರು. ವಿಡಿಯೋ ಮೂಲಕ ಭಾಷಣ ಮಾಡಿದ ಇಮ್ರಾನ್ ಜೊತೆ ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಮತ್ತು ಖೈಬರ್ ಪಖ್ತುನಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಇದ್ದರು.
ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ಕಮರ್ ಜಾವೇದ್ ಬಾಜ್ವಾ ಅವರು ತಮ್ಮ ಪಕ್ಷದ ವಿರುದ್ಧ ರೂಪಿಸಲಾದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಪಿಟಿಐ ಸರ್ಕಾರದ ಪತನಕ್ಕೆ ಜನರಲ್ ಬಾಜ್ವಾ ಮಾತ್ರ ಜವಾಬ್ದಾರರು ಎಂದು ಪಾಕ್ ಮಾಜಿ ಪ್ರಧಾನಿ ಆರೋಪಿಸಿದರು.
ಇಮ್ರಾನ್ ಖಾನ್ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು, ಇಲ್ಲದಿದ್ದರೆ ದೇಶ ಮುಳುಗಬಹುದು ಎಂದು ಎಚ್ಚರಿಸಿದರು. ಪಾಕಿಸ್ತಾನದ ಸಮಸ್ಯೆಗಳಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯೊಂದೇ ಪರಿಹಾರ, ಆದರೆ ಸೋಲುವ ಭೀತಿಯಿಂದಾಗಿ ಸರ್ಕಾರ ಹೊಸ ಚುನಾವಣೆಗಳಿಗೆ ಹೆದರುತ್ತಿದೆ ಎಂದು ಹೇಳಿದರು.