ಜೆರುಸಲೆಂ : ಗಾಜಾ ಆಸ್ಪತ್ರೆ ಮೇಲೆ ನಡೆದ ಭೀಕರ ದಾಳಿಯಿಂದಾಗಿ ಅರಬ್ ನಾಯಕರೊಂದಿಗಿನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ. ಇಸ್ರೇಲ್ ಅನ್ನು ಬೆಂಬಲಿಸಲು ಇಂದು ಬೈಡನ್ ದೇಶಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಜೋರ್ಡಾನ್‌ನ ಅಮ್ಮನ್‌ನಲ್ಲಿ ಅರಬ್ ನಾಯಕರೊಂದಿಗೆ ಮಾತುಕತೆ ನಡೆಸಬೇಕಾಗಿತ್ತು. ಆದರೆ ಗಾಜಾದ ಅಲ್ ಅಹ್ಲಿ ಆಸ್ಪತ್ರೆ ಮೇಲಿನ ದಾಳಿಯಿಂದಾಗಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಶೃಂಗಸಭೆ ರದ್ದುಗೊಳಿಸಲಾಗಿದೆ.
"ಜೋರ್ಡಾನ್ ರಾಜ ಅಬ್ದುಲ್ಲಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಮತ್ತು ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಅಮ್ಮಾನ್‌ನಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷ ಜೋ ಬೈಡನ್ ಸಭೆಯನ್ನು ರದ್ದುಗೊಳಿಸಲಾಗಿದೆ" ಎಂದು ಜೋರ್ಡಾನ್ ವಿದೇಶಾಂಗ ಸಚಿವ ಅಯ್ಮಾನ್ ಸಫಾದಿ ಘೋಷಿಸಿದ್ದಾರೆ.
ಜೋರ್ಡಾನ್‌ನಲ್ಲಿ ಬೈಡನ್ ಜೊತೆಗಿನ ಶೃಂಗಸಭೆ ರದ್ದು ಆಗಿರುವ ಬಗ್ಗೆ ಶ್ವೇತಭವನ ಸಹ ದೃಢಪಡಿಸಿದೆ. "ಜೋ ಬೈಡನ್ ಅವರು ಜೋರ್ಡಾನ್, ಈಜಿಪ್ಟ್ ಮತ್ತು ಪ್ಯಾಲೆಸ್ಟೈನ್ ನಾಯಕರೊಂದಿಗೆ ಅಮ್ಮಾನ್‌ನಲ್ಲಿ ಶೃಂಗಸಭೆ ನಡೆಯಬೇಕಿತ್ತು. ಆದರೆ, ಗಾಜಾದ ಆಸ್ಪತ್ರೆ ಮೇಲೆ ನಡೆದ ಬಾಂಬ್ ಸ್ಫೋಟದ ಬಳಿಕ ಈ ಸಭೆಯನ್ನು ಮುಂದೂಡಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೊಂದೆಡೆ, ಇಸ್ರೇಲ್ ಸೇನೆಯು ಗಾಜಾ ಆಸ್ಪತ್ರೆಯ ಮೇಲೆ ದಾಳಿ ಮಾಡಿಲ್ಲ, ಇಸ್ಲಾಮಿಕ್ ಜಿಹಾದ್‌ನ ರಾಕೆಟ್‌ನಿಂದ ಸ್ಫೋಟ ಸಂಭವಿಸಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.