ಮೆಲ್ಬೋರ್ನ್ : ಬ್ರಿಸ್ಬೇನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವೊಂದರ ಮೇಲೆ ಶನಿವಾರ ಖಲಿಸ್ತಾನ್ ಪರ ಬೆಂಬಲಿಗರು ದಾಳಿ ನಡೆಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯದಲ್ಲಿ ಹಿಂದೂ ದೇವಾಲಯಗಳ ಧ್ವಂಸ ಸರಣಿ ಮುಂದುವರೆದಿದೆ. ಬ್ರಿಸ್ಬೇನ್‌ನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಪುರೋಹಿತರು ಮತ್ತು ಭಕ್ತರು ಇಂದು ಬೆಳಗ್ಗೆ ಕರೆ ಮಾಡಿ ನಮ್ಮ ದೇವಾಲಯದ ಗೋಡೆಗಳನ್ನು ಧ್ವಂಸ ಮಾಡಿರುವ ಬಗ್ಗೆ ನನಗೆ ಮಾಹಿತಿ ನೀಡಿದರು ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ಹೇಳಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.
ನಾವು ಕ್ವೀನ್ಸ್‌ಲ್ಯಾಂಡ್ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ದೇವಾಲಯ ಮತ್ತು ಭಕ್ತರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸತೀಂದರ್ ಶುಕ್ಲಾ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಮಾನವ ಹಕ್ಕುಗಳ ಸಂಸ್ಥೆಯ ನಿರ್ದೇಶಕಿ ಸಾರಾ ಗೇಟ್ಸ್, ಇತ್ತೀಚಿನ ದ್ವೇಷ ಕೃತ್ಯವು ಆಸ್ಟ್ರೇಲಿಯಾದ ಹಿಂದೂಗಳನ್ನು ಭಯಭೀತಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ಈ ದ್ವೇಷ ಕೃತ್ಯವು ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಭಯೋತ್ಪಾದಕ ದಾಳಿಯಾಗಿದೆ. ಈ ಸಂಘಟನೆ ಆಸ್ಟ್ರೇಲಿಯಾದ ಹಿಂದೂಗಳನ್ನು ಭಯಭೀತಗೊಳಿಸಲು ಪ್ರಯತ್ನಿಸುತ್ತಿದೆ. ಅಪಪ್ರಚಾರ, ಕಾನೂನುಬಾಹಿರ ಕ್ರಮಗಳು ಮತ್ತು ಸೈಬರ್ ಅಪರಾಧಗಳ ಮೂಲಕ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯು ಭಯ ಮತ್ತು ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಗೇಟ್ಸ್ ಹೇಳಿದರು. ದೇವಾಲಯದ ಮೇಲಿನ ದಾಳಿಯ ನಂತರ ಹಿಂದೂ ಸಮುದಾಯದ ಹೋರಾಟದ ಚಿತ್ರವನ್ನು ಗೇಟ್ಸ್ ಟ್ವೀಟ್ ಮಾಡಿದ್ದಾರೆ. ದೇವಸ್ಥಾನ ಸಮಿತಿ ಹಾಗೂ ಹಿಂದೂ ಸಮುದಾಯದ ಸದಸ್ಯರು ಗೋಡೆ ಮೇಲೆ ಬರೆಯಲಾದ ಹಿಂದೂ ವಿರೋಧಿ ದ್ವೇಷ ಬರಹಗಳನ್ನು ಸ್ವಚ್ಛಗೊಳಿಸಿದರು.