ಕಠ್ಮಂಡು (ನೇಪಾಳ): ನೆರೆಯ ನೇಪಾಳದಲ್ಲಿ ಪ್ರಬಲ ಭೂಕಂಪದಿಂದ 157ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಬೆನ್ನಲ್ಲೇ ಇಂದು ಮತ್ತೆ ಭೂಮಿ ನಡುಗಿದೆ. ಶುಕ್ರವಾರ ತಡರಾತ್ರಿ ಹಿಮಾಲಯದ ರಾಷ್ಟ್ರದಲ್ಲಿ 6.4 ತೀವ್ರತೆಯ ಭೂಕಂಪ ಉಂಟಾಗಿತ್ತು. ಇದರ ಬೆನ್ನಲ್ಲೇ ಇವತ್ತು ಬೆಳಗಿನ ಜಾವ 3.6 ತೀವ್ರತೆಯ ಮತ್ತೊಂದು ಭೂಕಂಪದ ಅನುಭವವಾಗಿದೆ.
ಇಂದು ಬೆಳಗ್ಗೆ 4:38ರ ಸುಮಾರಿಗೆ ರಾಜಧಾನಿ ಕಠ್ಮಂಡುವಿನಿಂದ ವಾಯುವ್ಯಕ್ಕೆ 169 ಕಿಮೀ ದೂರ, 10 ಕಿಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಆದರೆ, ಈ ಭೂಕಂಪದಲ್ಲಿ ಯಾವುದೇ ಸಾವು-ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ.
ಮನೆ-ಮಠ ಕಳೆದುಕೊಂಡ ಸಾವಿರಾರು ಜನ: ಶುಕ್ರವಾರ ರಾತ್ರಿ ಸಂಭವಿಸಿದ ಹಠಾತ್ ಭೂಕಂಪದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ನೂರಾರು ಮನೆಗಳು ನೆಲಸಮವಾಗಿದೆ. ಜನತೆ ರಾತ್ರಿಗಳನ್ನು ಬಯಲಲ್ಲೇ ಕಳೆಯುವಂತೆ ಆಗಿದೆ. ಜಾಜರ್‌ಕೋಟ್ ಜಿಲ್ಲೆಯ ಹಳ್ಳಿಗಳಲ್ಲಿನ ಹೆಚ್ಚಿನ ಮನೆಗಳು ಕುಸಿದು ಬಿದ್ದಿವೆ. ಮತ್ತಷ್ಟು ತೀವ್ರವಾಗಿ ಹಾನಿಗೊಳಗಾಗಿವೆ. ಪಟ್ಟಣ ಪ್ರದೇಶದಲ್ಲಿ ಕಾಂಕ್ರೀಟ್ ಮನೆಗಳು ಸಹ ಹಾನಿಯಾಗಿವೆ.
ದುರಂತದಲ್ಲಿ ಇದುವರೆಗೆ ಮೃತರ ಒಟ್ಟು 157ಕ್ಕೆ ಏರಿಕೆಯಾಗಿದೆ. ಈ ಪೈಕಿ 120 ಮಂದಿಯ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸುಮಾರು 253 ಜನರು ಗಾಯಗೊಂಡಿದ್ದಾರೆ. ಸಂತ್ರಸ್ತರ ಸಂಬಂಧಿಕರು ಸಾಮೂಹಿಕ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾರೆ. ನಮ್ಮ ಗ್ರಾಮಸ್ಥರ ಶವಗಳನ್ನು ಅಂತ್ಯಸಂಸ್ಕಾರ ಮಾಡಲು ನಾವು ಕಾಯುತ್ತಿದ್ದೇವೆ. ಜೊತೆಗೆ ಗಾಯಗೊಂಡವರನ್ನೂ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಚಿಯುರಿ ಗ್ರಾಮದ ನಿವಾಸಿ ಲಾಲ್ ಬಹದ್ದೂರ್ ಬಿಕಾ, ಭಾನುವಾರ ಅಂತ್ಯಕ್ರಿಯೆಗೆ ಮಾಡಲು ಬಿಳಿ ಬಟ್ಟೆಯಲ್ಲಿ ಸುತ್ತಿ ಇರಿಸಿದ್ದ 13 ಶವಗಳನ್ನು ತೋರಿಸುತ್ತಾ ಹೇಳಿದರು.