ಜೆರುಸಲೇಂ (ಇಸ್ರೇಲ್): ಒಂದು ವರ್ಷದ ಹಿಂದೆ ತನ್ನ ಕುಟುಂಬದೊಂದಿಗೆ ಇಸ್ರೇಲ್‌ಗೆ ವಲಸೆ ಬಂದ ಭಾರತೀಯ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಗುರುವಾರ ರಾತ್ರಿ ಕಿರ್ಯಾತ್ ಶ್ಮೋನಾ ಪ್ರದೇಶದಲ್ಲಿ ಪಾರ್ಟಿಯೊಂದರಲ್ಲಿ ಜಗಳ ನಡೆದ ನಂತರ ಆತನಿಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
18 ವರ್ಷದ ಯೆಯೋಲ್ ಲೆಹಿಂಗಾಹೆಲ್ ಎಂಬಾತ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯ ನಂತರ ನೋಫ್ ಹಗಾಲಿಲ್‌ನಲ್ಲಿರುವ ಮನೆಗೆ ಮರಳಬೇಕಿತ್ತು. ಆದರೆ, ಜಗಳದ ಮಧ್ಯೆ ಸಿಕ್ಕಿಹಾಕಿಕೊಂಡ ಆತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಇಸ್ರೇಲ್ ಮಾಧ್ಯಮವೊಂದು ವರದಿ ಮಾಡಿದೆ.
ಇಸ್ರೇಲ್‌ನಲ್ಲಿ ಭಾರತೀಯ ಯಹೂದಿ ವಲಸಿಗರ ಸಮುದಾಯದೊಂದಿಗೆ ಕೆಲಸ ಮಾಡುವ ಮೀರ್ ಪಾಲ್ಟಿಯೆಲ್ ಹೇಳುವ ಪ್ರಕಾರ - ಯೋಲ್ ಶಬ್ಬತ್‌ಗೆ ಮನೆಗೆ ಬರಬೇಕಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಸುಮಾರು 7 ಗಂಟೆಗೆ ಅವರ ಸ್ನೇಹಿತರೊಬ್ಬರು ಕುಟುಂಬಕ್ಕೆ ಕರೆ ಮಾಡಿ ಕಳೆದ ರಾತ್ರಿ ಜಗಳವಾಗಿತ್ತು ಮತ್ತು ಯೋಲ್ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದ್ದರು. ಆದರೆ, ಕುಟುಂಬವು ಆಸ್ಪತ್ರೆಗೆ ತಲುಪುವ ಮುಂಚೆಯೇ ಲೆಹಿಂಗಾಹೆಲ್ ನಿಧನರಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ 15 ವರ್ಷ ವಯಸ್ಸಿನ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ. ನಂತರ 13 ರಿಂದ 15 ವಯೋಮಾನದ ಏಳು ಯುವಕರನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿ: ಮತ್ತೊಬ್ಬ ಇಸ್ಲಾಮಿಕ್ ಜಿಹಾದ್ ಕಮಾಂಡರ್ ಹತ್ಯೆ