ಇಂದು ದೈತ್ಯ ಮಾಹಿತಿ ಕಣಜದಾರ ಗೂಗಲ್ ಪುಟ ಓಪನ್ ಮಾಡಿದಾಕ್ಷಣ ಅಲ್ಲಿರುವ ಸ್ಪೆಷಲ್ ಡೂಡಲ್ನಲ್ಲಿ ಅಧ್ಯಯನ ನಿರತರಾಗಿರುವ ಮಹಿಳೆಯೊಬ್ಬಳು ಕಾಣಸಿಗುತ್ತಾರೆ. ಯಾರಿವರು? ಇಂದಿನ ಡೂಡಲ್ ವಿಶೇಷತೆಯೇನು?. ಇಡೀ ಪ್ರಪಂಚಕ್ಕೆ ಹಸಿರುಮನೆ ಪರಿಣಾಮವನ್ನು ಪರಿಚಯಿಸಿದ ಅಮೆರಿಕದ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯುನಿಸ್ ನ್ಯೂಟನ್ ಫೂಟ್ ಅವರಿಗಿಂದು 204ನೇ ಹುಟ್ಟುಹಬ್ಬ. ಯುನಿಸ್ ಅವರು ಭೂಮಿಯ ತಾಪಮಾನ ಏರಿಕೆಗೆ ಕಾರಣವಾದ ಅನಿಲವನ್ನು ಕಂಡುಹಿಡಿದ ಮೊದಲ ವ್ಯಕ್ತಿಯಾಗಿದ್ದಾರೆ.
ಫೂಟ್ ಜೀವನಚರಿತ್ರೆ:ಜುಲೈ 17, 1819ರಲ್ಲಿ ಅಮೆರಿಕದ ಕನೆಕ್ಟಿಕಟ್‌ನಲ್ಲಿ ಜನಿಸಿದ ಇವರು ಟ್ರಾಯ್ ಫೀಮೇಲ್ ಸೆಮಿನರಿಯಲ್ಲಿ ವ್ಯಾಸಂಗ ಮಾಡಿದರು. ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಆಸಕ್ತಿಯಿದ್ದ ಇವರಿಗೆ ರಸಾಯನಶಾಸ್ತ್ರ ಪ್ರಯೋಗಾಲಯಗಳಲ್ಲಿ ಭಾಗವಹಿಸಲು ಈ ವಿದ್ಯಾಸಂಸ್ಥೆ ಪ್ರೋತ್ಸಾಹಿಸಿತು. ಆದರೆ ಇದು ಮಹಿಳೆಯರನ್ನು ವೈಜ್ಞಾನಿಕ ಕ್ಷೇತ್ರದಿಂದ ವ್ಯಾಪಕವಾಗಿ ದೂರವಿಡುತ್ತಿದ್ದ ಕಾಲಘಟ್ಟವಾಗಿತ್ತು. ಆದರೆ, ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಫೂಟ್, ಛಲ ಬಿಡದೆ ತನ್ನದೇ ಆದ ಪ್ರಯೋಗಗಳನ್ನು ನಡೆಸುತ್ತಿದ್ದರು. 1856ರಲ್ಲಿ ಇವರು ನಡೆಸಿದ ಪ್ರಯೋಗವೊಂದು ಜಗತ್ತಿಗೆ ಹವಾಮಾನ ಬದಲಾವಣೆಯ ಕುರಿತು ತಿಳುವಳಿಕೆ ನೀಡಿತು.
ವಾತಾವರಣದ ಮೇಲೆ ಕಾರ್ಬನ್ ಡೈ ಆಕ್ಸೈಡ್ ಪರಿಣಾಮ: ಫೂಟ್ ಅವರು ಮೊದಲ ಬಾರಿಗೆ ಒಂದು ವಿಶೇಷ ಪ್ರಯೋಗವನ್ನು ಭೂಮಿಯ ತಾಪಾಮಾನದ ಕುರಿತು ನಡೆಸುತ್ತಾರೆ. ಇದಕ್ಕಾಗಿ ಸಿಲಿಂಡರ್‌ಗಳಲ್ಲಿ ವಿವಿಧ ಅನಿಲಗಳನ್ನು ಇರಿಸುತ್ತಾರೆ. ಅವೆಲ್ಲವನ್ನೂ ವೀಕ್ಷಣೆಗಾಗಿ ಸೂರ್ಯನ ಬೆಳಕಿಗೆ ಒಡ್ಡಲಾಗುತ್ತದೆ. ಸೂರ್ಯನ ಬೆಳಕಿನ ಪರಿಣಾಮ ಕಾರ್ಬನ್ ಡೈಆಕ್ಸೈಡ್ ಇತರ ಅನಿಲಗಳಿಗಿಂತ ಹೆಚ್ಚು ಬಿಸಿಯಾಗಿರುವುದನ್ನು ಫೂಟ್ ಗಮನಿಸುತ್ತಾರೆ. ಕಾರ್ಬನ್ ಡೈ ಆಕ್ಸೈಡ್ ಭೂಮಿಯ ಮೇಲೆ ಹೆಚ್ಚು ಬಿಸಿ ಪರಿಣಾಮವನ್ನು ಬೀರುವುದರಿಂದ, ಭೂಮಿಯ ತಾಪಮಾನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕಾರ್ಬನ್ ಡೈ ಆಕ್ಸೈಡ್ ಹೊಂದಿದೆ ಎಂದು ತೀರ್ಮಾನಿಸಿದರು. ಆದ್ದರಿಂದ, ಕಾರ್ಬನ್ ಡೈ ಆಕ್ಸೈಡ್ ಮಟ್ಟಗಳು ಮತ್ತು ವಾತಾವರಣದ ಉಷ್ಣತೆಯ ನಡುವಿನ ಸಂಪರ್ಕವನ್ನು ಕಂಡುಹಿಡಿದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಫೂಟ್ ಪಾತ್ರರಾದರು.