ವಾಷಿಂಗ್ಟನ್:ಅಟ್ಲಾಂಟಿಕ್ ಮಹಾಸಾಗರದಲ್ಲಿ ಹಾರುತ್ತಾ ಬೇಹುಗಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ಅನ್ನು ಅಮೆರಿಕ ಶನಿವಾರ ಹೊಡೆದು ನೆಲಕ್ಕುರುಳಿಸಿದೆ. ಮೊಂಟಾನಾದಿಂದ ದಕ್ಷಿಣ ಕೆರೊಲಿನಾದವರೆಗೆ ಅಮೆರಿಕ ಖಂಡವನ್ನು ದಾಟಿ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಚೀನಾದ ಕಣ್ಗಾವಲು ಬಲೂನ್ ಹಾರಾಡುತ್ತಿತ್ತು. ಇದನ್ನು ಕಂಡ ಸೇನೆ, ಅಧ್ಯಕ್ಷ ಜೋ ಬೈಡನ್ ಅವರ ಅನುಮತಿ ಪಡೆದು ಉಡಾಯಿಸಿದೆ.
ಅಮೆರಿಕ ಖಂಡದ ಆಯಕಟ್ಟಿನ ಸ್ಥಳಗಳಲ್ಲಿ ಬೇಹುಗಾರಿಕೆ ಮಾಡುವ ಸಲುವಾಗಿ ಚೀನಾ ನಿರ್ಮಿತ ಬಲೂನ್ ಇಲ್ಲಿ ಹಾರಾಡುತ್ತಿತ್ತು. ವಿಷಯ ಗಮನಕ್ಕೆ ಬಂದ ಬಳಿಕ ಕ್ಷಿಪ್ರ ನಿರ್ಧಾರ ಕೈಗೊಂಡ ಬೈಡನ್ ಅವರು, ಜನರ ಜೀವಹಾನಿಯಾಗದಂತೆ ಬಲೂನ್ ಹೊಡೆದು ಹಾಕಲು ಅನುಮತಿ ನೀಡಿದ್ದರು. ತಕ್ಷಣವೇ ಕಾರ್ಯಾಚರಣೆಗಿಳಿದ ಉತ್ತರ ಕಮಾಂಡೋ ದಾಳಿ ಮಾಡಿದೆ.
ಅಮೆರಿಕ ಖಂಡದಲ್ಲಿ ಕಣ್ಗಾವಲು ನಡೆಸುತ್ತಿದ್ದ ಈ ಬಲೂನ್ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ವಿಶ್ಲೇಷಣೆಯ ಬಳಿಕ ಇದು ಜನರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಅನುಮಾನ ಮೂಡಿದ್ದು, ತಕ್ಷಣ ಅಧ್ಯಕ್ಷರಿಗೆ ಮಾಹಿತಿ ರವಾನಿಸಲಾಗಿತ್ತು. ಬಳಿಕ ದೊರೆತ ಆದೇಶದಂತೆ ಎತ್ತರದಲ್ಲಿ ಹಾರುತ್ತಿದ್ದ ಬಲೂನ್ ಅನ್ನು ಉಡಾಯಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಗಡಿಗಳಲ್ಲಿ ಸಂಚರಿಸುತ್ತಿದ್ದ ಚೀನಾ ಬಲೂನನ್ನು ವಿಶ್ಲೇಷಿಸಿದ ಬಳಿಕವೇ ಅಮೆರಿಕ ಮಿಲಿಟರಿ ಕಮಾಂಡೋಗಳು ಈ ನಿರ್ಧಾರಕ್ಕೆ ಬಂದಿವೆ. ಇದು ಎತ್ತರದಲ್ಲಿ ಹಾರಾಡುತ್ತಾ ಜನರಿಗೆ ಅಪಾಯವನ್ನುಂಟು ಮಾಡುವ ದುರುದ್ದೇಶ ಹೊಂದಿತ್ತು. ರಕ್ಷಣಾ ಇಲಾಖೆ, ಗುಪ್ತಚರ ಸಂಗ್ರಹ ಚಟುವಟಿಕೆಗಳನ್ನು ಬಲೂನ್ ಕಣ್ಗಾವಲಿಟ್ಟಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.