ಟೆಲ್ ಅವಿವ್ (ಇಸ್ರೇಲ್) : ವೆಸ್ಟ್ ಬ್ಯಾಂಕ್ನ ನಿರಾಶ್ರಿತರ ಶಿಬಿರದಲ್ಲಿದ್ದುಕೊಂಡು ಇಸ್ರೇಲ್ಗೆ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಪ್ಯಾಲೆಸ್ಟೈನ್ ಉಗ್ರರು ಶನಿವಾರ ಬೆಳಗ್ಗೆ ಸಾರ್ವಜನಿಕರ ಎದುರು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ನೆರೆದಿದ್ದ ಜನರ ಗುಂಪು ಇಬ್ಬರು ಶಂಕಿತ ವ್ಯಕ್ತಿಗಳ ಶವಗಳನ್ನು ಗಲ್ಲಿಗಳ ಮೂಲಕ ಕಾಲಿನಿಂದ ಒದ್ದು ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ನೇತು ಹಾಕಿತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವು ಎರಡನೇ ದಿನಕ್ಕೆ ಕಾಲಿಟ್ಟ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಮೃತರನ್ನು 31 ವರ್ಷದ ಹಮ್ಜಾ ಮುಬಾರಕ್ ಮತ್ತು 29 ವರ್ಷದ ಅಜಮ್ ಜುಬ್ರಾ ಎಂದು ಗುರುತಿಸಲಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ನವೆಂಬರ್ 6 ರಂದು ತುಲ್ಕರೆಮ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಭದ್ರತಾ ಪಡೆಗಳಿಗೆ ಇಬ್ಬರು ಪ್ಯಾಲೆಸ್ಟೈನಿಯರು ಸಹಾಯ ಮಾಡಿದ್ದಾರೆ ಎಂದು ಸ್ಥಳೀಯ ಉಗ್ರಗಾಮಿ ಗುಂಪು ಆರೋಪಿಸಿತ್ತು. ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೂವರು ಪ್ರಮುಖ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಬ್ಬರು ಶಂಕಿತ ಮಾಹಿತಿದಾರರನ್ನು ಕೊಂದ ವೀಡಿಯೊ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಜನರ ಗುಂಪು ಈ ಇಬ್ಬರು ವ್ಯಕ್ತಿಗಳನ್ನು ನಿಂದಿಸುವುದು ಕೇಳಿ ಬರುತ್ತದೆ. ಇನ್ನು ಈ ಇಬ್ಬರು ಶಂಕಿತರು ತಾವು ಇಸ್ರೇಲ್ ರಕ್ಷಣಾ ಪಡೆಗಳಿಗಾಗಿ (ಐಡಿಎಫ್) ಕೆಲಸ ಮಾಡಿರುವುದಾಗಿ ಒಪ್ಪಿಕೊಂಡಿರುವುದು ಒಂದು ವೀಡಿಯೊ ತುಣುಕಿನಲ್ಲಿ ಕಾಣಿಸುತ್ತದೆ.