ಟೆಲ್ ಅವೀವ್ (ಇಸ್ರೇಲ್): ಹಮಾಸ್ ಅಲ್-ಶಿಫಾ ಆಸ್ಪತ್ರೆಯನ್ನು ಮಿಲಿಟರಿ ಸೌಲಭ್ಯವಾಗಿ ಬಳಸುತ್ತಿದೆ ಎಂಬುದಕ್ಕೆ ತನ್ನ ಬಳಿ ಬಲವಾದ ಪುರಾವೆಗಳಿವೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಬುಧವಾರ ಹೇಳಿದೆ. "ಕಳೆದ ಒಂದು ಗಂಟೆಯಲ್ಲಿ, ಹಮಾಸ್ ಅಲ್-ಶಿಫಾ ಆಸ್ಪತ್ರೆಯನ್ನು ತನ್ನ ಮಿಲಿಟರಿ ಪ್ರಧಾನ ಕಚೇರಿಯಾಗಿ ಬಳಸುತ್ತಿದೆ ಎಂಬುದಕ್ಕೆ ನಾವು ನಂಬಲರ್ಹ ಪುರಾವೆಗಳನ್ನು ನೋಡಿದ್ದೇವೆ" ಎಂದು ಐಡಿಎಫ್ ಅಧಿಕಾರಿ ಹೇಳಿದರು. ಆದಾಗ್ಯೂ ಯಾವೆಲ್ಲ ಸಾಕ್ಷ್ಯಗಳು ಲಭ್ಯವಾಗಿವೆ ಎಂಬುದನ್ನು ಐಡಿಎಫ್ ತಿಳಿಸಿಲ್ಲ. ಆದರೆ ಶೀಘ್ರವೇ ಈ ಬಗ್ಗೆ ವಿವರಗಳನ್ನು ನೀಡುವುದಾಗಿ ಅದು ಹೇಳಿದೆ.
ಶಸ್ತ್ರಾಸ್ತ್ರಗಳು ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುವ ಮೂಲಸೌಕರ್ಯಗಳು ಆಸ್ಪತ್ರೆಯ ಸಂಕೀರ್ಣದೊಳಗೆ ಪತ್ತೆಯಾಗಿವೆ ಎಂದು ಐಡಿಎಫ್ ಹೇಳಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಮಂಗಳವಾರ, ಐಡಿಎಫ್ ಹಲವಾರು ಕಟ್ಟಡಗಳು ಮತ್ತು ಭೂಗತ ಸೌಲಭ್ಯಗಳ ಮೇಲೆ ಹರಡಿರುವ ಆಸ್ಪತ್ರೆ ಸಂಕೀರ್ಣದ ನಿರ್ದಿಷ್ಟ ಪ್ರದೇಶದಲ್ಲಿ ತಪಾಸಣೆ ಕಾರ್ಯ ಆರಂಭಿಸಿದೆ.
ಪ್ರಸ್ತುತ ತನ್ನ ಮಿಲಿಟರಿ ಕಾರ್ಯಾಚರಣೆಯಲ್ಲಿ ರೋಗಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಗಾಯಾಳು ನಾಗರಿಕರೊಂದಿಗೆ ಯಾವುದೇ ಘರ್ಷಣೆ ನಡೆಸುತ್ತಿಲ್ಲ ಎಂದು ಐಡಿಎಫ್ ಅಧಿಕಾರಿ ಹೇಳಿದರು.
ಅಲ್-ಶಿಫಾ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆಯಿಂದಾಗಿ 37 ಶಿಶುಗಳು ಅಪಾಯದಲ್ಲಿವೆ ಎಂದು ಹಮಾಸ್ ನಡೆಸುತ್ತಿರುವ ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಈ ಶಿಶುಗಳನ್ನು ಪರ್ಯಾಯ ಸ್ಥಳಗಳಿಗೆ ವರ್ಗಾಯಿಸುವ ಪ್ರಸ್ತಾಪ ಇನ್ನೂ ಜಾರಿಯಲ್ಲಿದೆ ಹಾಗೂ ಪ್ರಸ್ತಾಪವನ್ನು ಹಮಾಸ್ ನೇತೃತ್ವದ ಆರೋಗ್ಯ ಸಚಿವಾಲಯ ಒಪ್ಪಿಕೊಳ್ಳಬಹುದು ಎಂದು ಐಡಿಎಫ್ ಹೇಳಿದೆ.
ನವಜಾತ ಶಿಶುಗಳನ್ನು ಉತ್ತರ ಗಾಜಾದ ಹೊರಗಿನ ಪರ್ಯಾಯ ಸೌಲಭ್ಯಕ್ಕೆ ಸ್ಥಳಾಂತರಿಸಲು ಅನುವು ಮಾಡಿಕೊಡಲು ಆಂಬ್ಯುಲೆನ್ಸ್ ಮೂಲಕ ಸಾಗಿಸುವ ಸಾಮರ್ಥ್ಯವಿರುವ ಇನ್ಕ್ಯೂಬೇಟರ್ಗಳನ್ನು ಈಗಾಗಲೇ ಇಸ್ರೇಲ್ ಅಲ್ ಶಿಫಾ ಆಸ್ಪತ್ರೆಗೆ ಒದಗಿಸಿದೆ. ನವಜಾತ ಶಿಶುಗಳಿಗೆ ಇನ್ಕ್ಯೂಬೇಟರ್ಗಳು, ಶಿಶು ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಇಸ್ರೇಲ್ನಿಂದ ಐಡಿಎಫ್ ಟ್ಯಾಂಕ್ಗಳ ಮೂಲಕ ತಂದು ಶಿಫಾಗೆ ತಲುಪಿಸಲಾಗಿದೆ ಎಂದು ಮಿಲಿಟರಿ ತಿಳಿಸಿದೆ.
ಈ ಸರಬರಾಜುಗಳು ಅಗತ್ಯವಿರುವವರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ತಂಡಗಳು ಮತ್ತು ಅರೇಬಿಕ್ ಮಾತನಾಡುವ ಸೈನಿಕರು ಸ್ಥಳದಲ್ಲಿದ್ದಾರೆ ಮತ್ತು ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ. ಆಸ್ಪತ್ರೆಯಲ್ಲಿ ಅಡಗಿರುವ ಹಮಾಸ್ ಉಗ್ರರು ಈ ಕೂಡಲೇ ಶರಣಾಗತರಾಗುವಂತೆ ಇಸ್ರೇಲ್ ಮಿಲಿಟರಿ ಕರೆ ನೀಡಿದೆ.
ಇದನ್ನೂ ಓದಿ :ಗಾಜಾದ ಆಸ್ಪತ್ರೆಗಳಲ್ಲಿ ಆಶ್ರಯ ಪಡೆದ ಹಮಾಸ್ ಉಗ್ರರು: ಅಮೆರಿಕ ಗುಪ್ತಚರ ಮಾಹಿತಿ