ಕಠ್ಮಂಡು(ನೇಪಾಳ): 10 ವಿದೇಶಿಗರು ಸೇರಿದಂತೆ 72 ಜನರಿದ್ದ ನೇಪಾಳದ ಪ್ರಯಾಣಿಕ ವಿಮಾನವು ಭಾನುವಾರ ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ನದಿಯ ದಡದಲ್ಲಿ ಪತನಗೊಂಡಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದ್ದು, 68 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 72 ಮಂದಿ ಕೂಡ ಸಾವನ್ನಪ್ಪಿದ್ದಾರೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 10 ವಿದೇಶಿ ಪ್ರಯಾಣಿಕರಲ್ಲಿ 5 ಮಂದಿ ಭಾರತೀಯರಾಗಿದ್ದರು.
ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (CAAN) ಪ್ರಕಾರ, ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.33 ಕ್ಕೆ ಟೇಕಾಫ್ ಆಗಿದೆ. ಪೋಖರಾ ಹಿಮಾಲಯ ಭಾಗದ ಪ್ರಮುಖ ಪ್ರವಾಸಿ ತಾಣವಾಗಿದೆ. ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ, ಹಳೆಯ ವಿಮಾನ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ವಿಮಾನ ಪತನಗೊಂಡಿದೆ. ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಯೇತಿ ಏರ್‌ಲೈನ್ಸ್ ವಕ್ತಾರ ಸುದರ್ಶನ್ ಬರ್ತೌಲಾ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ನೇಪಾಳ ಪ್ರಧಾನಿ ಭೇಟಿ: ವಿಮಾನ ಪತನವಾದ ಸ್ಥಳಕ್ಕೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅಲಿಯಾಸ್ ಪ್ರಚಂಡ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ ಪ್ರಚಂಡ ಅವರು ಸಚಿವ ಸಂಪುಟದ ತುರ್ತು ಸಭೆ ನಡೆಸಿದರು. ಅಪಘಾತಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸಲು ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ದುರಂತ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ಸೋಮವಾರ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
27 ವರ್ಷಗಳಲ್ಲಿ 27 ವಿಮಾನ ದುರಂತಗಳು: ಕಳೆದ ವರ್ಷ ಮೇ 30ರಂದು ತಾರಾ ಏರ್ಜೆಟ್ ನಾಪತ್ತೆಯಾಗಿ, ತಡವಾಗಿ ಬೆಟ್ಟದ ಮೇಲೆ ಪತನಗೊಂಡು ಪತ್ತೆಯಾಗಿತ್ತು. ಈ ಏರ್ಜೆಟ್ನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 22 ಮಂದಿಯ ಶವಗಳನ್ನು ಧ್ವಂಸಗೊಂಡಿದ್ದ ಏರ್ಜೆಟ್ನಿಂದ ಹೊರತೆಗೆಯಲಾಗಿತ್ತು. ಈ ಘಟನೆ ಮಾಸುವ ಮುನ್ನುವೇ ಇದೀಗ ಇಂದು ಮತ್ತೊಂದು ವಿಮಾನ ಪತನ ದುರಂತ ನಡೆದಿದೆ. ಇದೊಂದೇ ಅಲ್ಲ ಈ ಹಿಂದೆಯೂ ನೇಪಾಳದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಹಲವಾರು ವಿಮಾನ ದುರಂತಗಳು ಸಂಭವಿಸಿವೆ. ಇಂದು ಮಧ್ಯಾಹ್ನ ನಡೆದ ಯೇತಿ ಏರ್‌ಲೈನ್ಸ್‌ನ ವಿಮಾನ ಪತನ ಹಿಂದಿನ ಭೀಕರ ವಿಮಾನ ದುರಂತಗಳನ್ನು ಮತ್ತೆ ನೆನಪಿಸಿದೆ. ದಾಖಲೆಗಳ ಪ್ರಕಾರ ನೇಪಾಳದಲ್ಲಿ ಕಳೆದ 27 ವರ್ಷಗಳಲ್ಲಿ ಸುಮಾರು 27 ವಿಮಾನ ಪತನದಂತಹ ದುರಂತಗಳು ಸಂಭವಿಸಿವೆ.
ರಾಯಲ್ ನೇಪಾಲ್ ಏರ್‌ಲೈನ್ಸ್ ವಿಮಾನ ಅಪಘಾತ: 1962, ಆಗಸ್ಟ್ 1ರಂದು, ಆಗಿನ ರಾಯಲ್ ನೇಪಾಲ್ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಡಗ್ಲಾಸ್ ಡಿಸಿ -3 ವಿಮಾನ ಗೌಚರ್ ವಿಮಾನ ನಿಲ್ದಾಣದಿಂದ ಪಾಲಂ(ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ವೇಳೆ ನೇಪಾಳದಲ್ಲಿ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 10 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದರು.
ಥಾಯ್ ಏರ್‌ವೇಸ್ ವಿಮಾನ ಅಪಘಾತ:1992, ಜುಲೈ 31ರಂದು ಥಾಯ್ ಏರ್‌ವೇಸ್ ಇಂಟರ್‌ನ್ಯಾಶನಲ್ ಫ್ಲೈಟ್ 311 ಥೈಲ್ಯಾಂಡ್‌ನ ಡಾನ್ ಮುಯಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪಿಸುತ್ತಿರುವಾಗ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ 99 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಸಾವನ್ನಪ್ಪಿದ್ದರು.
ಪಾಕ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಅಪಘಾತ:ಇದಾದ ಎರಡು ತಿಂಗಳಲ್ಲೇ ಅಂದರೆ ಸೆ. 28ರಂದು ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ ಎಲ್ಲಾ 155 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಮರಣ ಹೊಂದಿದ್ದರು. ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದು ಹೇಳಲಾಗುತ್ತದೆ.