ಬ್ಯಾಂಕಾಕ್:ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ವಿಪರೀತ ವಾಯುಮಾಲಿನ್ಯದಿಂದಾಗಿ ಒಂದೇ ವಾರದಲ್ಲಿ 2 ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿನದಿಂದ ದಿನಕ್ಕೆ ರಾಜಧಾನಿಯ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಜನರು ಜೀವಹಾನಿಕಾರಕ ಹೊಗೆಯಿಂದಲೇ ಬದುಕು ಸಾಗಿಸುತ್ತಿದ್ದಾರೆ. 10 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಬ್ಯಾಂಕಾಕ್ ಕೈಗಾರಿಕಾ ಹೊರಸೂಸುವಿಕೆ, ವಾಹನಗಳ ಹೊಗೆ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಬೆಳೆ ಸುಡುವಿಕೆಯಿಂದ ಬಳಲುತ್ತಿದೆ.
3 ತಿಂಗಳಲ್ಲಿ 13 ಲಕ್ಷ ಮಂದಿ ಅಸ್ವಸ್ಥ:ಸಾರ್ವಜನಿಕ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ವಾಯು ಮಾಲಿನ್ಯದಿಂದಾಗಿ 1.3 ದಶಲಕ್ಷಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಪೈಕಿ ಕಳೆದೊಂದು ವಾರದಲ್ಲಿ 2 ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾರ್ವಜನಿಕ ಆರೋಗ್ಯ ಸಚಿವಾಲಯದ ವೈದ್ಯ ಕ್ರಿಯಾಂಗ್‌ಕ್ರೈ ನಾಮ್‌ಥೈಸಾಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಹೊರಬರದಂತೆ ಸಲಹೆ ನೀಡಿದ್ದಾರೆ. ಜನರು ಎನ್-95 ಮಾಸ್ಕ್ ಧರಿಸುವಂತೆಯೂ ಹೇಳಿದ್ದಾರೆ.
ಮನೆಯಿಂದಲೇ ಕೆಲಸ ಮಾಡಿ: ಕೆಲವು ವರದಿಗಳ ಪ್ರಕಾರ, ಥಾಯ್ಲೆಂಡ್‌ನಲ್ಲಿ ವಾಯುಮಾಲಿನ್ಯ ಎಷ್ಟು ಗಂಭೀರವಾಗಿದೆ ಎಂದರೆ ಜನವರಿಯಿಂದ ಮನೆಯಿಂದಲೇ ಕೆಲಸ ಮಾಡಲು ಬ್ಯಾಂಕಾಕ್ ಅಧಿಕಾರಿಗಳು ಸಿಬ್ಬಂದಿಗೆ ಸೂಚಿಸಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ, ವಾಹನಗಳಿಂದ ಹೊರಬರುವ ಮಿತಿ ಮೀರಿದ ಹೊಗೆಯನ್ನು ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೇ, ಮಕ್ಕಳಿಗಾಗಿ ನಡೆಸುತ್ತಿರುವ ನಗರದ ನರ್ಸರಿಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿವೆ.