ನವದೆಹಲಿ:ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ 'ರಾಕೆಟ್ ಕಾಳಗ'ದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಕ್ಕಟ್ಟು ಇನ್ನೂ ಮುಂದುವರೆದಿರುವ ಕಾರಣ ಭಾರತದ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಇಸ್ರೇಲ್‌ಗೆ ತನ್ನೆಲ್ಲಾ ವಿಮಾನಗಳ ಹಾರಾಟವನ್ನು ಅಕ್ಟೋಬರ್ 14ರ ವರೆಗೆ ನಿಲ್ಲಿಸಿದೆ. ಇಸ್ರೇಲ್ನ ಪ್ರಮುಖ ನಗರ ಟೆಲ್ ಅವೀವ್‌ಗೆ ಹೊರಡುವ ಮತ್ತು ಅಲ್ಲಿಂದ ಬರುವ ತನ್ನೆಲ್ಲಾ ವಿಮಾನಗಳನ್ನು ಮುಂದಿನ 6 ದಿನಗಳ ಕಾಲ ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ ಭಾನುವಾರ ತಿಳಿಸಿದೆ.
'ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಯಾವುದೇ ವಿಮಾನದ ಬುಕ್ಕಿಂಗ್ ಮಾಡಿಸಿದಲ್ಲಿ ಅಂತಹ ಪ್ರಯಾಣಿಕರಿಗೆ ಏರ್‌ಲೈನ್ ಸಾಧ್ಯವಿರುವ ಎಲ್ಲ ನೆರವು ನೀಡಲಿದೆ' ಎಂದು ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಟೆಲ್ ಅವೀವ್‌ಗೆ ವಾರದಲ್ಲಿ ಐದು ವಿಮಾನಗಳನ್ನು ನಿರ್ವಹಿಸುತ್ತದೆ. ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ವಿಮಾನಗಳು ಅಲ್ಲಿಗೆ ತೆರಳುತ್ತವೆ. ದಾಳಿ ಶುರುವಾದ ಶನಿವಾರವೇ ಟೆಲ್ ಅವಿವ್‌ಗೆ ತೆರಳುವ ಮತ್ತು ಅಲ್ಲಿಂದ ಬರುವ ತನ್ನ ವಿಮಾನಗಳನ್ನು ಏರ್ಲೈನ್ಸ್ ರದ್ದುಗೊಳಿಸಿತ್ತು.
ದಾಳಿ- ಪ್ರತಿದಾಳಿಗೆ ಮಾರಣಹೋಮ:ಪ್ಯಾಲೆಸ್ತೇನ್ನ ಹಮಾಸ್ ಉಗ್ರಗಾಮಿಗಳು ಶನಿವಾರ ಇಸ್ರೇಲ್ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್ಗಳಿಂದ ಏಕಾಏಕಿ ದಾಳಿ ನಡೆಸಿತ್ತು. ದಿಢೀರ್ ಆಗಿ ನಡೆದ ದಾಳಿಯಲ್ಲಿ ಇಸ್ರೇಲ್ನ ನೂರಾರು ಜನರು ಸಾವಿಗೀಡಾಗಿ, ಸಾವಿರಾರ ಜನರು ಗಾಯಗೊಂಡಿದ್ದಾರೆ. ತನ್ನ ದೇಶದ ಮೇಲೆ ನಡೆದ ಆಕ್ರಮಣಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಗುಡುಗಿದ ಇಸ್ರೇಲ್, ಪ್ಯಾಲೆಸ್ತೇನ್ ಮೇಲೆ ಪ್ರತಿದಾಳಿ ನಡೆಸಿದೆ.
ನೆಲ, ವಾಯು, ಜಲದ ಮೂಲಕ ನಡೆಯುತ್ತಿರುವ ದಾಳಿಗಳಲ್ಲಿ ಈಗಾಗಲೇ ಎರಡೂ ದೇಶಗಳಲ್ಲಿ 500 ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ರಕ್ಷಣಾ ಪಡೆಗಳು ದಾಳಿ ಮಾಡುತ್ತಿವೆ. 50 ವರ್ಷಗಳ ಹಿಂದೆ ಯೋಮ್ ಕಿಪ್ಪೂರ್ ಯುದ್ಧದ ನಂತರ, ಈಗ ನಡೆದ ಹಮಾಸ್ ದಾಳಿಯು 'ಮಾರಣಾಂತಿಕ' ಎಂದು ಹೇಳಲಾಗಿದೆ.
ಇಸ್ರೇಲ್‌ಗೆ ಭಾರತ ಬೆಂಬಲ:ವಿಶ್ವದಲ್ಲಿಯೇ ಅತಿ ಚಾಣಾಕ್ಷ ರಹಸ್ಯ ಪಡೆಗಳನ್ನು ಹೊಂದಿರುವ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದನ್ನು ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಖಂಡಿಸಿವೆ. ಈ ಬಗ್ಗೆ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಯೋತ್ಪಾದಕ ದಾಳಿಗೆ ಒಳಗಾದ ಇಸ್ರೇಲ್‌ಗೆ ನಮ್ಮ ಬೆಂಬಲವಿದೆ. ಹಮಾಸ್ ದಾಳಿಯು ಖಂಡನೀಯ ಎಂದಿದ್ದರು.
ಇದನ್ನೂ ಓದಿ:ಇಸ್ರೇಲ್ ಪ್ರತಿದಾಳಿ: 232 ಪ್ಯಾಲೆಸ್ಟೀನ್ ಜನ ಸಾವು, ಹಮಾಸ್ ನಾಯಕನ ಮನೆ ಹೊಕ್ಕ ಫೈಟರ್‌ಜೆಟ್