ಲಂಡನ್( ಬ್ರಿಟನ್): ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಾಮರ್ಥ್ಯದಿಂದ ಸೃಷ್ಟಿಸಲಾದ ಸುಳ್ಳು ಮತ್ತು ತಪ್ಪು ದಾರಿಗೆಳೆಯುವ ಮಾಹಿತಿಗಳಿಂದ ಪ್ರಜಾಪ್ರಭುತ್ವ ನಾಶವಾಗುವ ಮತ್ತು ಸಮಾಜವನ್ನು ಧ್ರುವೀಕರಿಸುವ ಸಂಭವನೀಯತೆಗಳು ಜಾಗತಿಕ ಆರ್ಥಿಕತೆಗೆ ತಕ್ಷಣದ ಅಪಾಯವಾಗಿವೆ ಎಂದು ವಿಶ್ವ ಆರ್ಥಿಕ ವೇದಿಕೆ ಬುಧವಾರ ತನ್ನ ವರದಿಯಲ್ಲಿ ತಿಳಿಸಿದೆ.
ತನ್ನ ಇತ್ತೀಚಿನ ಜಾಗತಿಕ ಅಪಾಯಗಳ ವರದಿಯಲ್ಲಿ, ಪರಿಸರ ಅಪಾಯಗಳ ಸರಣಿಯು ದೀರ್ಘಾವಧಿಯಲ್ಲಿ ಅತಿದೊಡ್ಡ ಅಪಾಯಗಳನ್ನು ತರಲಿದೆ ಎಂದು ಸಂಸ್ಥೆ ಹೇಳಿದೆ. ಸ್ವಿಸ್ ಸ್ಕೀ ರೆಸಾರ್ಟ್ ನಗರವಾದ ದಾವೋಸ್ನಲ್ಲಿ ಸಿಇಒಗಳು ಮತ್ತು ವಿಶ್ವ ನಾಯಕರ ವಾರ್ಷಿಕ ಸಭೆಗೆ ಮುಂಚಿತವಾಗಿ ಈ ವರದಿ ಬಿಡುಗಡೆ ಮಾಡಲಾಗಿದೆ ಮತ್ತು ಸುಮಾರು 1,500 ತಜ್ಞರು, ಉದ್ಯಮದ ಮುಖಂಡರು ಮತ್ತು ನೀತಿ ನಿರೂಪಕರ ಸಮೀಕ್ಷೆಯನ್ನು ಇದು ಆಧರಿಸಿದೆ.
ವರದಿಯು ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ಮುಂದಿನ ಎರಡು ವರ್ಷಗಳಲ್ಲಿ ಅತ್ಯಂತ ತೀವ್ರವಾದ ಅಪಾಯ ಎಂದು ಪಟ್ಟಿ ಮಾಡಿದೆ. ತಂತ್ರಜ್ಞಾನದ ತ್ವರಿತ ಪ್ರಗತಿಯು ಹೊಸ ಸಮಸ್ಯೆಗಳನ್ನು ಹೇಗೆ ಸೃಷ್ಟಿಸುತ್ತಿದೆ ಅಥವಾ ಅಸ್ತಿತ್ವದಲ್ಲಿರುವವುಗಳನ್ನು ಇನ್ನಷ್ಟು ಹೇಗೆ ಹದಗೆಡಿಸುತ್ತಿದೆ ಎಂಬುದನ್ನು ವರದಿ ಎತ್ತಿ ತೋರಿಸಿದೆ. ಚಾಟ್ಜಿಪಿಟಿಯಂಥ ಜನರೇಟಿವ್ ಎಐ ಚಾಟ್ಬಾಟ್ ತಂತ್ರಜ್ಞಾನದ ಬೆಳವಣಿಗೆಯು ಸಮುದಾಯಗಳನ್ನು ಧ್ರುವೀಕರಿಸುವ ಅಪಾಯ ತಂದೊಡ್ಡಿದೆ. ಇಂಥ ಉನ್ನತ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಪರಿಣಿತರು ಮಾತ್ರವಲ್ಲದೇ ಕೌಶಲ್ಯ ಇಲ್ಲದವರು ಕೂಡ ಬಳಸಿಕೊಳ್ಳಬಹುದಾಗಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.