ಬೀಜಿಂಗ್(ಚೀನಾ):ಪಾಕಿಸ್ತಾನದಲ್ಲಿ ಉಗ್ರರ ದಾಳಿಗಳು ಮುಂದುವರೆದಿದೆ. ಅದರಲ್ಲೂ ಚೀನಾದ ಪ್ರಜೆಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದು, ಮಂಗಳವಾರದ ಕರಾಚಿ ಸ್ಫೋಟದಲ್ಲಿ ಮೂವರು ಚೀನಿಯರ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ಮೂಲ ಕಾರಣವನ್ನು ಕಂಡು ಹಿಡಿಯಬೇಕೆಂದು ಚೀನಾ ಪಾಕಿಸ್ತಾನವನ್ನು ಒತ್ತಾಯಿಸಿದೆ. ಪಾಕಿಸ್ತಾನದಲ್ಲಿ ತನ್ನ ಯೋಜನೆಗಳನ್ನು ಕಾಪಾಡಿಕೊಳ್ಳಲು ಮತ್ತು ಪಾಕ್ನಲ್ಲಿರುವ ತನ್ನ ಸಿಬ್ಬಂದಿಯನ್ನು ರಕ್ಷಿಸಲು ಪಾಕ್ ಸರ್ಕಾರ ಹೆಚ್ಚಿನ ಪ್ರಯತ್ನ ಪಡಬೇಕು ಎಂದು ಚೀನಾ ಆಗ್ರಹಿಸಿದೆ.
ಕರಾಚಿಯಲ್ಲಿರುವ ಪಾಕಿಸ್ತಾನ್ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಸಂಭವಿಸಿದ ಕಾರು ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇದರಲ್ಲಿ ಮೂವರು ಚೀನಾ ಪ್ರಜೆಗಳೂ ಸೇರಿದ್ದರು. ಪಾಕಿಸ್ತಾನ್ ವಿಶ್ವವಿದ್ಯಾನಿಲಯದ ಚೀನಿ ಭಾಷಾ ಬೋಧನಾ ಕೇಂದ್ರವಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿಯಲ್ಲಿದ್ದ ವ್ಯಾನ್‌ನಲ್ಲಿ ಈ ಸ್ಫೋಟ ಸಂಭವಿಸಿತ್ತು. ಈ ಬೆನ್ನಲ್ಲೇ ಚೀನಾದ ಸರ್ಕಾರಿ ಮಾಧ್ಯಮವು ಸ್ಫೋಟವನ್ನು ಖಂಡಿಸಿದ್ದು, ಚೀನಾ ಪ್ರಜೆಗಳ ಸುರಕ್ಷತೆಗಾಗಿ ಪಾಕಿಸ್ತಾನದ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.