ಇಸ್ಲಾಮಾಬಾದ್(ಪಾಕಿಸ್ತಾನ): 2014ರಲ್ಲಿ ಸೇನಾ ಕಾರ್ಯಾಚರಣೆ ವೇಳೆ ಸ್ಥಳಾಂತರಗೊಂಡು ಗಡಿ ದಾಟಿ ಪಲಾಯನಗೈದಿದ್ದ ಕನಿಷ್ಠ 30 ಪಾಕಿಸ್ತಾನಿ ಬುಡಕಟ್ಟು ಜನರು ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ ಮತ್ತು ಪರ್ವತ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ಬುಧವಾರ ಸಂಭವಿಸಿದ 6.1 ತೀವ್ರತೆಯ ಭೂಕಂಪದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಲ್ವಾರ್ ಮಂಡಿಯಲ್ಲಿ ಪಾಕ್-ಅಫ್ಘಾನ್ ಗಡಿಯನ್ನು ಪಾಕಿಸ್ತಾನದ ಅಧಿಕಾರಿಗಳು ತಾತ್ಕಾಲಿಕವಾಗಿ ತೆರೆದಿದ್ದು, 30 ಜನರ ಮೃತದೇಹಗಳನ್ನು ಅವರ ಸ್ಥಳೀಯ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಹಾಗೆ ಗಾಯಾಳುಗಳನ್ನು ಸಾಗಿಸಲು ಗುಲಾಮ್ ಖಾನ್ ಗಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಿರಾನ್‌ಶಾದಲ್ಲಿನ ಮಿಲಿಟರಿ ಮೂಲಗಳು ತಿಳಿಸಿವೆ.