ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಮಂಗಳವಾರ ಅಧಿಕಾರಕ್ಕೆ ಮರಳಿದ ಎರಡನೇ ವಾರ್ಷಿಕೋತ್ಸವ ಆಚರಿಸಿದರು. ಆಡಳಿತದಲ್ಲಿರುವ ತಾಲಿಬಾನ್ ಗುಂಪು ಆಗಸ್ಟ್ 15, 2021 ರಂದು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿತ್ತು. ಅಂದಿನ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಅದರ ಹೆಚ್ಚಿನ ನಾಯಕರು ದೇಶ ತೊರೆದಿದ್ದರು. ಯುಎಸ್ ಬೆಂಬಲಿತ ಸರ್ಕಾರ ಪತನಗೊಂಡ ನಂತರ ತಾಲಿಬಾನ್ ತನ್ನ ಸರ್ಕಾರ ರಚಿಸಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ದೇಶವು ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಿಲ್ಲ.
ಆಡಳಿತದ ಎರಡನೇ ವರ್ಷಾಚರಣೆ ಅಂಗವಾಗಿ ತಾಲಿಬಾನ್ ಅಧಿಕಾರಿಗಳು ದೇಶಾದ್ಯಂತ ಅಧಿಕೃತ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ನಡೆಸಿದರು. ಯುಎಸ್ ಆಕ್ರಮಣದಿಂದ ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನ ಎಂದು ಇಂದಿನ ದಿನ ಆಚರಿಸಲಾಯಿತು. "ಕಾಬೂಲ್ ವಿಜಯದ ಎರಡನೇ ವಾರ್ಷಿಕೋತ್ಸವದಂದು, ನಾವು ಅಫ್ಘಾನಿಸ್ತಾನದ ಮುಜಾಹಿದ್ (ಪವಿತ್ರ ಯೋಧ) ರಾಷ್ಟ್ರವನ್ನು ಅಭಿನಂದಿಸಲು ಬಯಸುತ್ತೇವೆ ಮತ್ತು ಈ ಮಹಾನ್ ವಿಜಯಕ್ಕಾಗಿ ಸರ್ವಶಕ್ತ ಅಲ್ಲಾಹನಿಗೆ ಧನ್ಯವಾದ ಹೇಳುತ್ತೇವೆ" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
1996 ರಿಂದ 2001 ರವರೆಗೆ ಅಧಿಕಾರ ನಡೆಸಿದ್ದ ತಾಲಿಬಾನ್ 2021 ರಲ್ಲಿ ಅಧಿಕಾರ ಮರಳಿ ಪಡೆದ ನಂತರ ಶರಿಯಾ (ಮುಸ್ಲಿಂ ವೈಯಕ್ತಿಕ ಕಾನೂನು) ನಿಯಮಗಳ ಅನ್ವಯ ಸರ್ಕಾರ ನಡೆಸುತ್ತಿದೆ. ದೇಶದಲ್ಲಿ ಮಹಿಳೆಯರು, ಜನಾಂಗೀಯ ಅಲ್ಪಸಂಖ್ಯಾತರು, ಮಾಧ್ಯಮಗಳು, ಹಕ್ಕುಗಳ ಗುಂಪುಗಳು ಮತ್ತು ಇತತರ ಮೇಲಿನ ನಿರ್ಬಂಧಗಳು ಸೇರಿದಂತೆ ಸರ್ವಾಧಿಕಾರಿ ನೀತಿಗಳು ಮರಳಿವೆ ವರದಿಗಳು ಹೇಳಿವೆ.