ಬ್ರೆಸಿಲಿಯಾ(ಬ್ರೆಜಿಲ್):ತನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಕುಪಿತನಾದ ಪ್ರಿಯಕರ ಮಾಜಿ ಪ್ರೇಯಸಿಯನ್ನು ಅಪಹರಿಸಿ ಮುಖದ ಮೇಲೆ ತನ್ನ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಟ್ಯಾಟೂ(ಹಚ್ಚೆ) ಹಾಕಿ ಮನೋವಿ ವಿಕೃತಿ ಮೆರೆದ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ.
ಏನಿದು ಘಟನೆ:ಬ್ರೆಜಿಲ್ನ ಸಾವೊ ಪೌಲೊ ನಿವಾಸಿ ತಯಾನೆ ಕಾಲ್ಡಾಸ್ (18) ಆಕೆಯ ಗೆಳೆಯ ಗೇಬ್ರಿಯಲ್ ಕೊಯೆಲ್ಹೋ (20) 2019 ರಿಂದ ಪರಿಚಯವಾಗಿದ್ದರು. ಅಲ್ಲದೇ, ಡೇಟಿಂಗ್ ಕೂಡ ನಡೆಸುತ್ತಿದ್ದರು. ಬಳಿಕ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರೂ ದೂರವಾಗಿದ್ದರು.
ಆದರೆ, ಪಾಗಲ್ಪ್ರೇಮಿ ಗೇಬ್ರಿಯಲ್ ತನ್ನ ಮಾಜಿ ಪ್ರೇಯಸಿ ತಯಾನೆಯನ್ನು ಬಿಟ್ಟಿರಲಿಲ್ಲ. ಆಗಾಗ ಕಾಲೇಜಿಗೆ ಬಂದು ಕಿರುಕುಳ ನೀಡುತ್ತಿದ್ದನಂತೆ. ಕೆಲ ದಿನಗಳ ಹಿಂದೆ ತಯಾನೆಯನ್ನು ಅಪಹರಿಸಿದ ಗೇಬ್ರಿಯಲ್ ಆಕೆಯನ್ನು ತನ್ನ ಮನೆಗೆ ಹೊತ್ತೊಯ್ದು ಮುಖದ ಮೇಲೆ ಕಾಣಿಸುವಂತೆ ದೊಡ್ಡದಾಗಿ ತನ್ನ ಹೆಸರನ್ನು ಟ್ಯಾಟೂ(ಹಚ್ಚೆ) ಹಾಕಿದ್ದಾನೆ.
ಟ್ಯಾಟೂ ಕಲಾವಿದನಾಗಿದ್ದ ಗೇಬ್ರಿಯಲ್ ತನ್ನೊಂದಿಗೆ ಬ್ರೇಕಪ್ ಮಾಡಿಕೊಂಡ ತಯಾನೆಗೆ ಬುದ್ಧಿ ಕಲಿಸಲು ಈತ ಈ ಉಪಾಯವನ್ನು ಹುಡುಕಿದ್ದಾನೆ. ಮರುದಿನ ತಯಾನಾಳಾ ತಾಯಿ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಗೇಬ್ರಿಯಲ್ ಮನೆಯಲ್ಲಿ ತಯಾನೆಯನ್ನು ಪತ್ತೆ ಮಾಡಿ ಕರೆದೊಯ್ದಿದ್ದಾರೆ.
ಗೇಬ್ರಿಯಲ್ನ ಹುಚ್ಚಾಟದಿಂದ ಆಕೆ ಅತಿಯಾಗಿ ಭಯಗೊಂಡಿದ್ದಳಂತೆ. ಗಲ್ಲದಿಂದ ದೊಡ್ಡದಾಗಿ ಟ್ಯಾಟೂ ಹಾಕಿದ್ದಕ್ಕೆ ನೊಂದುಕೊಂಡಿದ್ದಾಳೆ. ತನ್ನನ್ನು ಬಲವಂತವಾಗಿ ಅಪಹರಿಸಿ ಮನೆಗೆ ಕರೆದೊಯ್ದು ಆತ ನನ್ನ ಮುಖವನ್ನು ವಿಕಾರ ಮಾಡಿದ್ದಾನೆ ಎಂದು ಆಕೆ ದೂರಿದ್ದಾಳೆ. ಆದರೆ, ಈಕೆಯ ಅಪವಾದವನ್ನು ಗೇಬ್ರಿಯಲ್ನ ಮನೆಯವರು ತಳ್ಳಿಹಾಕಿದ್ದಾರೆ. ಹುಡುಗಿಯೇ ಇಷ್ಟಪಟ್ಟು ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದಿದ್ದಾರೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ಬಗ್ಗೆ ಕನಿಕರ ವ್ಯಕ್ತವಾಗಿದೆ. ಅಲ್ಲದೇ ಹಲವಾರು ಟ್ಯಾಟೂ ಕಲಾವಿದರು ಆಕೆಯ ಮುಖದ ಮೇಲಿನ ಟ್ಯಾಟೂವನ್ನು ಲೇಸರ್ನಿಂದ ಅಳಿಸಿ ಹಾಕುವುದಾಗಿ ಹೇಳಿದ್ದಾರೆ. ಇದೀಗ ಯುವತಿಯ ಮುಖದ ಮೇಲಿನ ಟ್ಯಾಟೂವನ್ನು ಲೇಸರ್ ಚಿಕಿತ್ಸೆಯಿಂದ ಅಳಿಸಿ ಹಾಕಲಾಗಿದೆ. ಇದಲ್ಲದೇ, ಪ್ರಿಯಕರನ ಹೆಸರಲ್ಲಿದ್ದ ಇನ್ನೆರಡು ಟ್ಯಾಟೂವನ್ನು ಕೂಡ ಅಳಿಸಲಾಗಿದೆ. ತನ್ನ ಮುಖವನ್ನು ವಿಕಾರ ಮಾಡಿದ್ದಕ್ಕೆ ಮಾಜಿ ಪ್ರಿಯಕರನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ತಯಾನೆ ಒತ್ತಾಯಿಸಿದ್ದಾಳೆ.
ಓದಿ:ಐಷಾರಾಮಿ ಕ್ರೂಸ್ ಹಡಗು ಜೂನ್ 8ರಿಂದ 3 ದಿನಗಳ ಪ್ರಯಾಣ ಆರಂಭ.. ಚೆನ್ನೈ, ಪುದುಚೇರಿಗೆ ಟ್ರಿಪ್..