ಜಿನೀವಾ: ಪ್ರತಿ ಯುದ್ಧದಿಂದ ಹೆಚ್ಚು ಹಾನಿಗೆ ಒಳಗಾಗುವವರು ಮಹಿಳೆಯರು ಮತ್ತು ಮಕ್ಕಳು. ಅದೇ ರೀತಿ ಇದೀಗ ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ಯುದ್ಧದಿಂದ ಹಾನಿಗೆ ಒಳಗಾಗುತ್ತಿರುವವರು ಅವರೇ. ಯುದ್ಧದ ಕುರಿತು ವಿಶ್ವಸಂಸ್ಥೆ ನೀಡಿರುವ ವರದಿಯಲ್ಲಿ ಗಾಜಾದಲ್ಲಿನ ಹಿಂಸಾಚಾರದಲ್ಲಿ 4,93,00 ಮಹಿಳೆಯರು ಮತ್ತು ಬಾಲಕಿಯರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದು, 900 ಮಹಿಳೆಯರು ತಮ್ಮ ಗಂಡಂದಿರನ್ನು ಕಳೆದುಕೊಂಡು ವಿಧವೆ ಪಟ್ಟ ಹೊಂದಿದ್ದಾರೆ ಎಂದು ತಿಳಿಸಿದೆ.
ಯುದ್ಧದಲ್ಲಿ ಪುರುಷ ಸಂಗಾತಿಗಳು ಸಾವನ್ನಪ್ಪಿದ್ದು, ಇದರಿಂದ ಮಹಿಳೆಯರು ಮನೆಯ ಜವಾಬ್ದಾರಿಯನ್ನು ಹೊರುವಂತಾಗಿದ್ದು, ಈ ಮೂಲಕ ಯುದ್ಧದಿಂದ ವಿಧವೆ ಆದವರನ್ನು ವಿಶ್ವಸಂಸ್ಥೆ ಮಹಿಳೆ ಅಂದಾಜಿಸಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟ್ಟೆರೆಸ್ ಅವರ ಉಪ ವಕ್ತಾರ ಫಾರನ್ ಹಕ್ ತಿಳಿಸಿದ್ದಾರೆ. ಈ ಸಂಬಂಧ ಯುಎನ್ ವುಮೆನ್ ರ್ಯಾಪಿಡ್ ಅಸೆಸ್ಮೆಂಟ್ ಅಂಡ್ ಹ್ಯೂಮೆನಿಟೆರಿಯನ್ ರೆಸ್ಪಾನ್ಸ್ ಇನ್ ದ ಆಕ್ಯೂಪೈಡ್ ಪ್ಯಾಲೆಸ್ಟೈನಿಯನ್ ಟೆರಿಟರಿ (ಆಕ್ರಮಿತ ಪ್ಯಾಲೆಸ್ಟೈನಿಯನ್ ಪ್ರಾಂತ್ಯದಲ್ಲಿ ವಿಶ್ವಸಂಸ್ಥೆಯ ಮಹಿಳೆಯರ ತ್ವರಿತ ಮೌಲ್ಯಮಾಪನ ಮತ್ತು ಮಾನವೀಯ ಪ್ರತಿಕ್ರಿಯೆ) ವರದಿಯಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 7ರಿಂದ ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಕುರಿತು ಗುರುವಾರದವರೆಗೆ ಅಂಕಿ ಅಂಶವನ್ನು ವಿಶ್ವಸಂಸ್ಥೆ ಕಚೇರಿ ಸಂಗ್ರಹಿಸಿದೆ.
ಈ ಅಧ್ಯಯನ ಪ್ರಕಾರ 3,785 ಪ್ಯಾಲೆಸ್ಟೈನಿಯನ್ನರು ಸಾವನ್ನಪ್ಪಿದರೆ, 12,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಶೇ 53ರಷ್ಟು ಜನರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಕ್ಸಿನುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.