ಲಾಹೋರ್(ಪಾಕಿಸ್ತಾನ): ರಾವಲ್ಪಿಂಡಿಯಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡುವ ಭಾರತೀಯ ವೃದ್ಧೆಯೊಬ್ಬರ ಬಹುಕಾಲದ ಕನಸು ನನಸಾಗಿದೆ. ಪಾಕಿಸ್ತಾನವು 90 ವರ್ಷದ ರೀನಾ ಛಿಬ್ಬರ್ ವರ್ಮಾ ಅವರಿಗೆ ವೀಸಾ ನೀಡಿದೆ. 75 ವರ್ಷದ ನಂತರ ವಾಘಾ-ಅಟ್ಟಾರಿ ಗಡಿಯ ಮೂಲಕ ಅವರು ಇಲ್ಲಿಗೆ ಬಂದಿದ್ದಾರೆ. ದೇಶ ವಿಭಜನೆಯ ಸಮಯದಲ್ಲಿ ಇವರು ಪಾಕ್ ತೊರೆದಿದ್ದರು.
ವರ್ಮಾ ಅವರು ಇಲ್ಲಿಗೆ ಬಂದ ನಂತರ ರಾವಲ್ಪಿಂಡಿಗೆ ಭೇಟಿ ನೀಡಿ ಅಲ್ಲಿ ತಮ್ಮ ಪೂರ್ವಜರ ನಿವಾಸಕ್ಕೆ ತೆರಳಿದರು. ಇದಾದ ನಂತರ ಶಾಲೆ ಮತ್ತು ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ. ಪುಣೆಯಿಂದ ಪಾಕ್‌ಗೆ ಬಂದಿರುವ ವರ್ಮಾ, ವಿಭಜನೆಯಾದಾಗ ಅವರ ಕುಟುಂಬ ರಾವಲ್ಪಿಂಡಿಯ ದೇವಿ ಕಾಲೇಜು ರಸ್ತೆಯಲ್ಲಿ ವಾಸಿಸುತ್ತಿತ್ತಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
ನಾನು ಮಾಡರ್ನ್ ಸ್ಕೂಲ್ ನಲ್ಲಿ ಓದುತ್ತಿದ್ದೆ. ನನ್ನ ನಾಲ್ವರು ಒಡಹುಟ್ಟಿದವರೂ ಅದೇ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಉಳಿದ ನನ್ನ ಸಹೋದರ ಮತ್ತು ಸಹೋದರಿ ಕೂಡ ಮಾಡರ್ನ್ ಸ್ಕೂಲ್ ಬಳಿ ಇರುವ ಗಾರ್ಡನ್ ಕಾಲೇಜಿನಲ್ಲಿ ಓದುತ್ತಿದ್ದರು ಎಂದು ವಿವರಿಸಿದ್ದಾರೆ.
ನನ್ನ ತಂದೆ ಪ್ರಗತಿಪರ ಚಿಂತನೆಯ ವ್ಯಕ್ತಿಯಾಗಿರುವುದರಿಂದ ನಮಗೆ ಧಾರ್ಮಿಕ ಕಟ್ಟುಪಾಡುಗಳು ಹೆಚ್ಚಿರಲಿಲ್ಲ. ನಾವು ಎಲ್ಲರ ಜೊತೆ ಬೆರೆಯುತ್ತಿದ್ದೆವು. ನಮ್ಮ ಮನೆಗೆ ಮುಸ್ಲಿಂ ಸ್ನೇಹಿತರು ಬರುತ್ತಿದ್ದರು. ವಿಭಜನೆಯ ಮೊದಲು ಹಿಂದೂ ಮತ್ತು ಮುಸ್ಲಿಂ ಸಮಸ್ಯೆ ಇರಲಿಲ್ಲ. ನಂತರ ಇದು ಸಂಭವಿಸಿದೆ. ಇದೇ ರೀತಿ ನಮ್ಮಂಥವರ ವೀಸಾ ನಿರ್ಬಂಧಗಳನ್ನು ಸಡಿಲಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.