ಬ್ಯಾಂಕಾಕ್(ಥಾಯ್ಲೆಂಡ್):ರೈಲ್ ಮತ್ತು ಟ್ರಕ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ 8 ಜನ ಸಾವನ್ನಪ್ಪಿ, 4 ಜನ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ಥಾಯ್ಲೆಂಡ್ನಲ್ಲಿ ನಡೆದಿದೆ.
ಥಾಯ್ಲೆಂಡ್ನ ರಾಜ್ಯ ರೈಲ್ವೇ ಇಲಾಖೆಯು ಅಪಘಾತದ ಬಗ್ಗೆ ಮಾಹಿತಿ ನೀಡಿದೆ. ಚಾಚೋಂಗ್ಸಾವೊ ಪ್ರಾಂತ್ಯದ ಮುಯಾಂಗ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ 2.20ಕ್ಕೆ ಟ್ರಕ್ ವಾಹನವು ರೈಲು ಹಳಿ ದಾಟುತ್ತಿದ್ದಾಗ ಅದೇ ಸಮಯದಲ್ಲಿ ಎದುರಿನಿಂದ ಬಂದ ಗೂಡ್ಸ್ ರೈಲು ಟ್ರಕ್ಗೆ ಡಿಕ್ಕಿ ಹೊಡದು ಈ ಅವಘಡ ಸಂಭವಿಸಿದೆ.
ಅಲ್ಲಿನ ಮಾಧ್ಯಮ ವರದಿಯ ಪ್ರಕಾರ, ಅಪಘಾತದಲ್ಲಿ ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಈವರೆಗೆ ಸಾವನ್ನಪ್ಪಿದವರಲ್ಲಿ 22,55,64 ವರ್ಷದ ಮೂವರು ಮಹಿಳೆಯರು ಹಾಗೆ 18, 27, 55, 60 ಮತ್ತು 62 ವರ್ಷ ವಯಸ್ಸಿನ ಐವರು ಪುರುಷರು ಎಂದು ಗುರುತಿಸಲಾಗಿದೆ.
ಸಾವನ್ನಪ್ಪಿದವರ ಮೃತದೇಹಗಳನ್ನು ಪೊಲೀಸ್ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಪರಿಶೀಲನೆ ನಡೆಸಿ ನಂತರ ಸಂಬಂಧ ಪಟ್ಟವರಿಗೆ ಹಸ್ತಾಂತರಿಸಿ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡಲಾಗಿದೆ. ಇನ್ನು ಅಪಘಾತಗೊಂಡ ಸ್ಥಳವು ಅನಧಿಕೃತ ಕ್ರಾಸಿಂಗ್ ಪಾಯಿಂಟ್ನಲ್ಲಿದ್ದು, ರೈಲ್ಗಳು ಬಂದಾಗ ಅಥವಾ ತುರ್ತು ಪರಿಸ್ಥಿತಿ ಇದ್ದಾಗ ಅಲ್ಲಿ ಯಾವುದೇ ಸ್ವಯಂ ಚಾಲಿತ ರೈಲ್ವೆ ಗೇಟಿನ ವ್ಯವಸ್ಥೆಗಳಿಲ್ಲ. ಬರೀ ಇದೊಂದೇ ಅಲ್ಲದೇ, ಪ್ರಸ್ತುತ ರಾಷ್ಟ್ರೀಯ ರೈಲು ವ್ಯವಸ್ಥೆಯಲ್ಲಿ 693 ಅನಧಿಕೃತ ಕ್ರಾಸಿಂಗ್ ಪಾಯಿಂಟ್‌ಗಳನ್ನು ಇದೆ ಎಂದು ಸಂಸ್ಥೆ ತಿಳಿಸಿದೆ.
ಅಪಘಾತದ ಕುರಿತು ಸ್ವತಃ ಟ್ರಕ್ ಡ್ರೈವರ್ ವಿಚೈ ಯುಲೆಕ್ ವಿವರಿಸಿದ್ದು, ಆತನಿಗೆ ರೈಲ್ವೆ ಹಳಿ ಬಳಿ ಮುಂದಿನಿಂದ ರೈಲು ಬರುತ್ತಿರುವುದು ಮತ್ತು ಅದರ ಹಾರ್ನ್ ಶಬ್ದ ಕೇಳಿಸಿದೆ. ಆಗ ತನ್ನ ವಾಹನದ ವೇಗವನ್ನು ನಿಧಾನಗೊಳಿಸಿ ಅಲ್ಲೇ ನಿಲ್ಲಿಸಲು ಯತ್ನಿಸಿದ್ದಾನೆ. ಆದರೆ, ಟ್ರಕ್ನಲ್ಲಿದ್ದ ಪ್ರಯಾಣಿಕರು ಗಾಡಿಯನ್ನು ನಿಲ್ಲಿಸದೇ ಚಲಿಸುವಂತೆ ಹೇಳಿದ್ದಾರೆ. ಹೀಗಾಗಿ ರೈಲ್ವೇ ಹಳಿ ದಾಟಲು ಹೋದಾಗ ಡಿಕ್ಕಿ ಹೊಡೆದು, ಅಪಘಾತ ಸಂಭವಿಸಿದೆ ಎಂದು ತಿಳಿಯಿತು. ಆದರೆ, ಆ ವೇಳೆಗೆ ಟ್ರಕ್ ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾನೆ ಎಂದು ರೈಲ್ವೆ ಪ್ರಾಧಿಕಾರ ಹೇಳಿದೆ.
ಅಪಘಾತಕ್ಕೆ ಕಾರಣವಾದ ಟ್ರಕ್ ವಾಹನ ಕಾರ್ಮಿಕರನ್ನು ಚೋನ್‌ಬುರಿ ಪ್ರಾಂತ್ಯದ ಲೇಮ್ ಚಾಬಾಂಗ್‌ಗೆ ಕರೆದೊಯ್ಯುತ್ತಿತ್ತು. ಮೂರು ಬಾರಿ ರೈಲಿನ ಹಾರ್ನ್ ಸದ್ದು ಕೇಳಿದರೂ ಚಾಲಕ ನಿಲ್ಲಿಸಲಿಲ್ಲ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಪಾದಚಾರಿಗಳಿಗೆ ಕಾರಿನಿಂದ ಡಿಕ್ಕಿ ಹೊಡೆದು, ಮಚ್ಚಿನಿಂದ ದಾಳಿ ಮಾಡಿದ ದುಷ್ಕರ್ಮಿ.. 14 ಮಂದಿಗೆ ಗಾಯ