ಟೋಕಿಯೊ: ಹಿರೋಶಿಮಾ ನಗರದ ಮೇಲೆ ಅಮೆರಿಕ ಪರಮಾಣು ಬಾಂಬ್ ದಾಳಿ ನಡೆಸಿ ಇಂದಿಗೆ 77 ವರ್ಷಗಳಾಗುತ್ತಿವೆ. ಈ ಮಧ್ಯೆ ಜಗತ್ತಿನಲ್ಲಿ ಪರಮಾಣು ಅಸ್ತ್ರಗಳ ಸಂಗ್ರಹದಲ್ಲಿ ಹೆಚ್ಚಳವಾಗುತ್ತಿರುವುದು ಮತ್ತು ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಹಲವಾರು ನಾಯಕರು, ಮತ್ತೊಂದು ಪರಮಾಣು ದಾಳಿಯ ಸಂಭವನೀಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತೆ ಪರಮಾಣು ಭೀತಿ:ಹಿರೋಶಿಮಾ ಮೇಲೆ ಪರಮಾಣು ಬಾಂಬ್ ದಾಳಿ ನಡೆದು 77 ವರ್ಷಗಳು ಕಳೆದ ನಂತರ ಈಗ ಮತ್ತೊಮ್ಮೆ ಪರಮಾಣು ಭೀತಿ ಆವರಿಸುತ್ತಿದೆ. "ಪರಮಾಣು ಶಸ್ತ್ರಾಸ್ತ್ರಗಳು ಅರಿವುಗೇಡಿ ಅಸ್ತ್ರಗಳು. ಅವುಗಳಿಂದ ವಿಶ್ವಕ್ಕೆ ಯಾವತ್ತೂ ಸುರಕ್ಷತೆ ಸಿಗಲಾರದು. ಅವು ಕೇವಲ ಸಾವು ಮತ್ತು ವಿನಾಶಗಳನ್ನು ಮಾತ್ರ ತರಬಲ್ಲವು" ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅಂಟೋನಿಯೊ ಗುಟೆರಸ್ ಹೇಳಿದರು. ಹಿರೋಶಿಮಾ ಪೀಸ್ ಪಾರ್ಕ್ನಲ್ಲಿ ನಡೆದ ಶಾಂತಿ ಪ್ರಾರ್ಥನೆ ಸಭೆಯಲ್ಲಿ ಅವರು ಮಾತನಾಡಿದರು.
ಹಿರೋಶಿಮಾ ನಗರದ ಮೇಲೆ ಅವತ್ತು ಆವರಿಸಿದ ಅಣಬೆಯಾಕಾರದ ಮೋಡಗಳಿಂದ ನಾವು ಯಾವ ಪಾಠ ಕಲಿತಿದ್ದೇವೆ ಎಂಬುದನ್ನು 77 ವರ್ಷಗಳ ನಂತರ ನಾವಿಂದು ಪರಿಶೀಲನೆ ಮಾಡಬೇಕಿದೆ. ಎಂದು ಅವರು ಹೇಳಿದರು. 1945ರ ಆಗಸ್ಟ್ 6 ರಂದು ಅಮೆರಿಕವು ಜಗತ್ತಿನ ಮೊದಲ ಪರಮಾಣು ಅಸ್ತ್ರವನ್ನು ಹಿರೋಶಿಮಾ ನಗರದ ಮೇಲೆ ಹಾಕಿತ್ತು. ಈ ದಾಳಿಯಲ್ಲಿ ಹಿರೋಶಿಮಾ ನಗರ ಸಂಪೂರ್ಣ ಭಸ್ಮವಾಗಿತ್ತು. ಇದರಲ್ಲಿ 1 ಲಕ್ಷ 40 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದರು.
ಇದಾಗಿ ಮೂರು ದಿನಗಳ ನಂತರ ಅಮೆರಿಕ ನಾಗಸಾಕಿಯ ಮೇಲೆ ಎರಡನೇ ಬಾಂಬ್ ಅನ್ನು ಬೀಳಿಸಿತ್ತು. ಈ ದಾಳಿಯಲ್ಲಿ 70 ಸಾವಿರ ಜನ ಸಾವಿಗೀಡಾಗಿದ್ದರು. ಇದರ ನಂತರ ಜಪಾನ್ ಆಗಸ್ಟ್ 15 ರಂದು ಶರಣಾಯಿತು ಮತ್ತು ಇಲ್ಲಿಗೆ ಎರಡನೇ ವಿಶ್ವಸಮರ ಕೊನೆಗೊಂಡಿತ್ತು. ಅಲ್ಲದೇ ಏಷ್ಯಾದಲ್ಲಿ ಜಪಾನ್‌ನ ಸುಮಾರು ಅರ್ಧ ಶತಮಾನದ ಆಳ್ವಿಕೆಯನ್ನು ಇದು ಕೊನೆಗೊಳಿಸಿತು. ಪ್ರಸ್ತುತ ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧದ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾ ಉಕ್ರೇನ್ ವಿರುದ್ಧ ಪರಮಾಣು ದಾಳಿ ನಡೆಸುವ ಭಯ ಆವರಿಸುತ್ತಿದೆ.