ವಿಶ್ವಸಂಸ್ಥೆ : ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್ಎಸ್ಎಫ್) ನಡುವಿನ ಯುದ್ಧ ಆರಂಭಗೊಂಡು ಮುಂದಿನ ವಾರ ಆರು ತಿಂಗಳಿಗೆ ಸಮೀಸುತ್ತಿದೆ. ಈ ಸಶಸ್ತ್ರ ಆಂತರಿಕ ಹೋರಾಟದಿಂದ ಸುಡಾನ್ ದೇಶ ಜರ್ಜರಿತವಾಗಿದ್ದು, ಅಂದಾಜು 19 ಮಿಲಿಯನ್ ಮಕ್ಕಳು ವಿದ್ಯಾಭ್ಯಾಸದಿಂದ ಹೊರಗುಳಿದಿದ್ದಾರೆ ಎಂದು ಯುನಿಸೆಫ್ ಮತ್ತು ಸೇವ್ ದಿ ಚಿಲ್ಡ್ರನ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಈ ಒಟ್ಟು ಮಕ್ಕಳಲ್ಲಿ ತಮ್ಮ ಪ್ರದೇಶದಲ್ಲಿ ಹೆಚ್ಚಿದ ಹಿಂಸಾಚಾರ ಮತ್ತು ಅಸುರಕ್ಷತೆಯಿಂದಾಗಿ ಸುಮಾರು 6.5 ಮಿಲಿಯನ್ ಮಕ್ಕಳು ಶಾಲೆಗೆ ಹೋಗಲಾಗುತ್ತಿಲ್ಲ. ಇನ್ನು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಕನಿಷ್ಠ 10,400 ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಏತನ್ಮಧ್ಯೆ, ಯುದ್ಧದ ಪರಿಣಾಮ ಕಡಿಮೆ ಇರುವ ಪ್ರದೇಶಗಳಲ್ಲಿ ಶಾಲೆಗಳನ್ನು ಮತ್ತೆ ಯಾವಾಗ ತೆರೆಯಲಾಗುತ್ತದೆ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಲಿ ಎಂದು ಈ ಪ್ರದೇಶಗಳ ನಾಗರಿಕರು ಕಾಯುತ್ತಿದ್ದಾರೆ. ಒಂದೊಮ್ಮೆ ಈ ಶಾಲೆಗಳು ಪುನಾರಂಭಗೊಂಡಲ್ಲಿ ಸುಮಾರು 5.5 ಮಿಲಿಯನ್ ಮಕ್ಕಳು ಮತ್ತೆ ವಿದ್ಯಾಭ್ಯಾಸ ಮುಂದುವರಿಸಬಹುದಾಗಿದೆ. ಸುಡಾನ್ 23 ಮಿಲಿಯನ್ ಮಕ್ಕಳನ್ನು ಹೊಂದಿದ್ದು, ಈ ಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿದೆ.
ಏಪ್ರಿಲ್ 15 ರಂದು ಸಂಘರ್ಷ ಭುಗಿಲೇಳುವ ಮೊದಲೇ ಸುಮಾರು 7 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಯುದ್ಧ ಮುಂದುವರಿದರೆ, ಮುಂಬರುವ ತಿಂಗಳುಗಳಲ್ಲಿ ಸುಡಾನ್ನಲ್ಲಿ ಯಾವುದೇ ಮಗು ಮತ್ತೆ ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಹೀಗೆ ಶಾಲೆಯಿಂದ ಹೊರಗುಳಿದ ಮಕ್ಕಳು ಸ್ಥಳಾಂತರಗೊಳ್ಳಬಹುದು, ಸಶಸ್ತ್ರ ಗುಂಪುಗಳೊಂದಿಗೆ ಹೋರಾಡಲು ನೇಮಕವಾಗಬಹುದು ಮತ್ತು ಇವರ ಮೇಲೆ ಲೈಂಗಿಕ ಹಿಂಸಾಚಾರಗಳು ನಡೆಯಬಹುದು ಎಂದು ಯುನಿಸೆಫ್ ಮತ್ತು ಸೇವ್ ದಿ ಚಿಲ್ಡ್ರನ್ ಎಚ್ಚರಿಸಿವೆ.
ಸಾಮಾಜಿಕ ಸೇವೆಗಳ ವೆಚ್ಚ ಸಂಪೂರ್ಣ ಸ್ಥಗಿತ:ಸಶಸ್ತ್ರ ಸಂಘರ್ಷ ಪ್ರಾರಂಭವಾದಾಗಿನಿಂದ ಸರ್ಕಾರ ಮಾಡುತ್ತಿದ್ದ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚವು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲಿನ ಶಿಕ್ಷಕರಿಗೆ ಬರುತ್ತಿದ್ದ ವೇತನ ಸ್ಥಗಿತವಾಗಿದೆ. ದೇಶದಲ್ಲಿ ಶಿಕ್ಷಣ ಸಾಮಗ್ರಿಗಳ ಕೊರತೆಯಿದ್ದು, ಸೌಲಭ್ಯಗಳು ಹಾಳಾಗಿವೆ. ಸುಡಾನ್ನ ಕೆಲ ಪ್ರದೇಶಗಳಲ್ಲಿ ಶೈಕ್ರಣಿಕ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಲಾಗುತ್ತಿದೆಯಾದರೂ ಕೆಲ ಅಡ್ಡಿ ಆತಂಕಗಳಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಯುನಿಸೆಫ್ ಮತ್ತು ಸೇವ್ ದಿ ಚಿಲ್ಡ್ರನ್ ಹೇಳಿವೆ.
ಸುರಕ್ಷಿತ ಪ್ರದೇಶಗಳಲ್ಲಿ ಶಾಲೆಗಳನ್ನು ಮತ್ತೆ ತೆರೆಯುವಂತೆ ಸುಡಾನ್ ಅಧಿಕಾರಿಗಳಿಗೆ ಯುನಿಸೆಫ್ ಮತ್ತು ಸೇವ್ ದಿ ಚಿಲ್ಡ್ರನ್ ಕರೆ ನೀಡಿವೆ. ಆದರೆ ಸುರಕ್ಷತೆ ಮತ್ತು ಭದ್ರತಾ ಕಾಳಜಿಗಳಿಂದಾಗಿ ಶಾಲೆಗಳು ತೆರೆಯಲು ಸಾಧ್ಯವಿಲ್ಲದ ಸಮುದಾಯಗಳಲ್ಲಿ ಪರ್ಯಾಯ ಕಲಿಕೆಯ ವಿಧಾನಗಳನ್ನು ಅನುಸರಿಸುವಂತೆ ತಿಳಿಸಲಾಗಿದೆ. ಸುಡಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಹಿಂಸಾಚಾರ ಭುಗಿಲೆದ್ದಾಗಿನಿಂದ ಸುಮಾರು 3,000 ಜನರು ಸಾವನ್ನಪ್ಪಿದ್ದಾರೆ ಮತ್ತು 6,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಯ ಪ್ಲಾನ್ ತಯಾರಾಗಿದ್ದು ಇರಾನ್ನಲ್ಲಿ: ವರದಿಯಲ್ಲಿ ಬಹಿರಂಗ!