ಇಸ್ತಾಂಬುಲ್, ಟರ್ಕಿ:ಗುರುವಾರ ರಾತ್ರಿ ಟರ್ಕಿಯ ದಕ್ಷಿಣ ಪ್ರದೇಶದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಅನೇಕ ಕಟ್ಟಡಗಳಿಗೆ ಹಾನಿಯಾಗಿರುವುದಲ್ಲದೇ 23 ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ಟರ್ಕಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ಕೇಂದ್ರಬಿಂದು ಮಾಲತ್ಯಾ ಪ್ರಾಂತ್ಯದ ಯೆಸಿಲುರ್ಟ್ ನಗರದಲ್ಲಿ ಕೇಂದ್ರಿಕೃತಗೊಂಡಿತ್ತು. ಅಡಿಯಾಮಾನ್‌ನಲ್ಲಿ ಭೂಕಂಪನದ ಅನುಭವವಾಗಿದೆ. ಫೆಬ್ರವರಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದ ಎರಡೂ ಪ್ರಾಂತ್ಯಗಳು ನಲುಗಿ ಹೋಗಿದ್ದವು. ಆಗ ಸಂಭವಿಸಿದ್ದ ಭೂಕಂಪನಕ್ಕೆ 50,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಇನ್ನು ಭೂಕಂಪದ ಕುರಿತು ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಾಲತ್ಯಾ ಮತ್ತು ಅಡಿಯಾಮಾನ್‌ನಲ್ಲಿ ಕಟ್ಟಡಗಳು ಕುಸಿತಗೊಂಡಿವೆ. ಭೂಕಂಪದಿಂದ ಪಾರಾಗಲು ಜನರು ತಮ್ಮ ಕಟ್ಟಡಗಳಿಂದ ಜಿಗಿದು ಗಾಯಗೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಭೂಕಂಪನ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಟರ್ಕಿ ಭೂಪ್ರದೇಶವೇ ದೋಷಪೂರಿತ:ಟರ್ಕಿಯಲ್ಲಿ ನಿರಂತರವಾಗಿ ಭೂಕಂಪನಗಳು ಉಂಟಾಗುತ್ತವೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಭೂ ಸಂರಚನೆ. ಟರ್ಕಿಯು ಅನಾಟೋಲಿಯನ್ ಟೆಕ್ಟೋನಿಕ್ ಪ್ಲೇಟ್‌ನಲ್ಲಿದೆ. ಹೀಗಾಗಿ ಇಲ್ಲಿ ಸತತವಾಗಿ ಕಂಪನ ಉಂಟಾಗುತ್ತಿರುತ್ತದೆ. ಭೂಮಿಯ ಶಿಲಾ ಪದರವು ಟೆಕ್ಟೋನಿಕ್ ಪ್ಲೇಟ್‌ಗಳು ಎಂದು ಕರೆಯಲ್ಪಡುವ ಸುಮಾರು 15 ಪ್ರಮುಖ ಚಪ್ಪಡಿಗಳಿಂದ ಕೂಡಿರುತ್ತದೆ. ಈ ಪ್ಲೇಟ್‌ಗಳ ನಡುವೆ ತಿಕ್ಕಾಟ ಸಹಜವಾಗಿರುತ್ತದೆ. ನಿರಂತರವಾಗಿ ಶಿಲಾ ಪದರಗಳ ಘರ್ಷಣೆಯಿಂದ ಮುರಿತ ಉಂಟಾಗಿ ಹಠಾತ್ ಚಲನೆಯಿಂದ ಭೂಕಂಪನ ಉಂಟಾಗುತ್ತದೆ ಎಂದು ಬ್ರಿಟಿಷ್ ಪುರಾತತ್ವ ಸಮೀಕ್ಷೆ ಹೇಳಿದೆ.