ಪೂರ್ವ ನೇಪಾಳದಲ್ಲಿ ಪ್ರವಾಹ, ಭೂಕುಸಿತ.. ಕಠ್ಮಂಡು(ನೇಪಾಳ):ಪೂರ್ವ ನೇಪಾಳದಲ್ಲಿ ಮಾನ್ಸೂನ್ - ಪ್ರಚೋದಿತ ಭೀಕರ ಪ್ರವಾಹ ಮತ್ತು ಭೂಕುಸಿತಗಳು ವಿನಾಶವನ್ನು ಉಂಟು ಮಾಡುತ್ತಿವೆ. ಈವರೆಗೆ ಐವರು ಸಾವನಪ್ಪಿ, 28 ಮಂದಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚೈನ್‌ಪುರ್ ಪುರಸಭೆ-4ರಲ್ಲಿ ನಿರ್ಮಾಣ ಹಂತದಲ್ಲಿರುವ ಸೂಪರ್ ಹೆವಾ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಮತ್ತು 21 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಭಾನುವಾರ ಬೆಳಗ್ಗೆ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವರದಿಯಾದ ಘಟನೆಗಳ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು "ದೇಶದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾದ ಆಸ್ತಿ ನಷ್ಟದಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ಜೊತೆಗೆ ಭದ್ರತಾ ಏಜೆನ್ಸಿಗಳು ಮತ್ತು ರಾಷ್ಟ್ರೀಯ ಸೇವಾ ಸಿಬ್ಬಂದಿಗೆ ನಾಪತ್ತೆಯಾದವರನ್ನು ರಕ್ಷಿಸಲು ನಾನು ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಪ್ರವಾಹದ ನಂತರ ಕಾರ್ಮಿಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆಯೇ ಅಥವಾ ಹೇವಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬೀರೇಂದ್ರ ಗೋದರ್ ಹೇಳಿದ್ದಾರೆ. ನೆರೆಯ ಪಂಚತಾರ್ ಜಿಲ್ಲೆಯಲ್ಲಿ ಭೂಕುಸಿತದಿಂದ ಮನೆ ಬಿದ್ದು 9 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಚೈನ್‌ಪುರದ ಐವರು ಗ್ರಾಮಸ್ಥರು ಕೂಡ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರಿ ಮಳೆ ಮುನ್ಸೂಚನೆ:ಮುಂದಿನ ದಿನಗಳಲ್ಲಿ ದೇಶದಲ್ಲಿ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನದಿಗಳಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಈ ತಿಂಗಳ ಆರಂಭದಲ್ಲಿ 1.25 ಮಿಲಿಯನ್ ನಾಗರಿಕರು ಈ ವರ್ಷ ಮಾನ್ಸೂನ್‌ನಿಂದ ಪ್ರಭಾವಿತರಾಗುತ್ತಾರೆ ಎಂದು ಅಂದಾಜಿಸಿದೆ. 2,86,998 ಕುಟುಂಬಗಳ ಅಂದಾಜು 1.298 ಮಿಲಿಯನ್ ವ್ಯಕ್ತಿಗಳು ವಿಪತ್ತಿನಿಂದ ಬಾಧಿತರಾಗುತ್ತಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಠ್ಮಂಡು ಪೋಸ್ಟ್ ವರದಿ ಪ್ರಕಾರ "ಕಳೆದ ವರ್ಷ ಸುಮಾರು 2 ಮಿಲಿಯನ್ ಜನರು ಬಾಧಿತರಾಗಿದ್ದರು. ನೇಪಾಳದಲ್ಲಿ ಮಾನ್ಸೂನ್ ಸಾಮಾನ್ಯವಾಗಿ ಜೂನ್ 13 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 23 ರಂದು ಕೊನೆಗೊಳ್ಳುತ್ತದೆ. ಕಳೆದ ವರ್ಷ ಮಾನ್ಸೂನ್ ಸರಾಸರಿ ದಿನಾಂಕಕ್ಕಿಂತ ಎಂಟು ದಿನಗಳ ಮೊದಲು ಅಂದರೆ ಜೂನ್ 5 ರಂದು ದೇಶವನ್ನು ಪ್ರವೇಶಿಸಿತ್ತು".
ಉತ್ತರ ಪ್ರದೇಶ, ದೆಹಲಿಯಲ್ಲಿ ಮಳೆ: ಉತ್ತರ ಪ್ರದೇಶ ಹಾಗೂ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಇಂದು ಬೆಳಗ್ಗೆ ಸ್ವಲ್ಪ ಮಳೆ ಸುರಿದಿದೆ. ಇದರಿಂದ ಬಿಸಿಲಿನ ತಾಪದಿಂದ ಕೊಂಚ ವಿಶ್ರಾಂತಿ ಸಿಕ್ಕಿದೆ. ಸೋಮವಾರ (ಜೂನ್ 19) ದೆಹಲಿಯಲ್ಲಿ ಅತಿ ಹಗುರವಾದ ಮತ್ತು ತುಂತುರು ಮಳೆಯಾಗುವ ಸಾಧ್ಯತೆಯೊಂದಿಗೆ ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿತ್ತು.
ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ (RWFC) ಶನಿವಾರ ದೆಹಲಿ-ಎನ್ಸಿಆರ್ನಲ್ಲಿ ಲಘು ಹಾಗೂ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಎನ್‌ಸಿಆರ್ (ಮನೇಸರ್) ಫಾರುಖ್‌ನಗರ, ಕೋಸಲಿ, ಸೋಹಾನಾ, ರೆವಾರಿ, ಬವಾಲ್, ನುಹ್ (ಹರಿಯಾಣ) ನಂದಗಾಂವ್, ಬರ್ಸಾನಾ, ಜಲೇಸರ್, ಸದಾಬಾದ್ (ಯುಪಿ) ಭಿವಾರಿ, ತಿಜಾರಾ, ಖೈರ್ತಾಲ್, ದೀಗ್ (ರಾಜಸ್ಥಾನ),"ನಲ್ಲಿ ಗುಡುಗು ಸಹಿತ ತುಂತುರು ಮಳೆಯಾಗಲಿದೆ ಎಂದು ಆರ್‌ಡಬ್ಲ್ಯೂಎಫ್‌ಸಿ ಟ್ವೀಟ್ ಮಾಡಿದೆ.
ಇದನ್ನೂ ಓದಿ:Heat Waves: ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಿರಿ, ತಲೆಗೆ ವಸ್ತ್ರ ಕಟ್ಟಿಕೊಳ್ಳಿ.. IMD 'ಆರೆಂಜ್' ಅಲರ್ಟ್!!