ಹೈದರಾಬಾದ್ (ತೆಲಂಗಾಣ): ಸದೃಢವಾಗಿರಲು ಪ್ರಯತ್ನಿಸುತ್ತಿರುವ ಜನರು ತೆಳ್ಳಗಿನ ಮತ್ತು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಇದಕ್ಕಾಗಿ ಇಂತಹವರು ತಮ್ಮ ಕಡುಬಯಕೆಗಳನ್ನು ತ್ಯಾಗ ಮಾಡಬೇಕು. ವಯಸ್ಸಾಗದಂತೆ ತಮ್ಮ ದೇಹವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಸೇವಿಸಬೇಕು. ವ್ಯಾಯಾಮದ ಕಟ್ಟುಪಾಡುಗಳಿಗೆ ಕಟ್ಟು ಬೀಳಲೇಬೇಕು. ಆದರೂ, ತಮ್ಮ ವಯಸ್ಸನ್ನು ಹಿಂತಿರುಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ನಡುವೆ ಸಾಫ್ಟ್‌ವೇರ್ ಡೆವಲಪರ್ವೊಬ್ಬರು ತಮ್ಮ ವಯಸ್ಸನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಹೌದು, ಆಶ್ಚರ್ಯ ಎಂದೆನಿಸಿದರೂ ಇದು ನಿಜ. ಮಧ್ಯವಯಸ್ಕ ಬ್ರಿಯಾನ್ ಜಾನ್ಸನ್ ಎಂಬುವವರು ತಮ್ಮ ಎಪಿಜೆನೆಟಿಕ್ (Epigenetics) ವಯಸ್ಸನ್ನು 5.1 ವರ್ಷಗಳಷ್ಟು ಕಡಿಮೆಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಮೆರಿಕದ ಅತಿ ಶ್ರೀಮಂತ ಸಾಫ್ಟ್‌ವೇರ್ ಉದ್ಯಮಿ ಆಗಿರುವ ಜಾನ್ಸನ್ 'ಬ್ಲೂಪ್ರಿಂಟ್' ಯೋಜನೆಯ ಮೂಲಕ ಇಂತಕ ವಿಚಿತ್ರ ಮತ್ತು ಆಶ್ಚರ್ಯಕರ ಕಸರತ್ತಿಗೆ ಕೈ ಹಾಕಿದ್ದಾರೆ. 45 ವರ್ಷದ ಜಾನ್ಸನ್ ತಮ್ಮ ಈ ಯೋಜನೆಯ ಮೂಲಕ 18 ವರ್ಷದ ಯುವಕನ ಅಂಗಗಳು ಮತ್ತು ಆರೋಗ್ಯವನ್ನು ಹೊಂದುವ ಗುರಿ ಇಟ್ಟಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
2 ಮಿಲಿಯನ್ ಡಾಲರ್ ವೆಚ್ಚ:ತಮ್ಮ ಮಧ್ಯ ವಯಸ್ಸಿನಲ್ಲಿ 18ರ ತರುಣನಾಗುವಾಸೆ ಹೊಂದಿರುವ ಬ್ರಿಯಾನ್ ಜಾನ್ಸನ್, ಇದನ್ನು ಸಾಧಿಸುವ ನಿಟ್ಟಿನಲ್ಲಿ 30 ವೈದ್ಯರು ಮತ್ತು ವೈದ್ಯಕೀಯ ತಜ್ಞರ ತಂಡವನ್ನು ಹೊಂದಿದ್ದಾರೆ. ಈ ತಂಡದ ಮೂಲಕ ತಮ್ಮ ದೇಹದ ಕಾರ್ಯಗಳನ್ನು ಮೇಲುಸ್ತುವಾರಿ ಮಾಡುತ್ತಾರೆ. ಅಲ್ಲದೇ, ಜಾನ್ಸನ್ ಅವರ ಪ್ರತಿಯೊಂದು ಅಂಗಗಳಲ್ಲಿ ವಯಸ್ಸಾದ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಈ ವೈದ್ಯರು ಸಹಾಯ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಕರ್ನಲ್‌ಕೋ ಎಂಬ ಕಂಪನಿಯ ಸಿಇಒ ಆಗಿರುವ ಈ ಬ್ರಿಯಾನ್ ಜಾನ್ಸನ್, 18ರ ಚಿರಯುವಕನ ದೇಹವನ್ನು ಹೊಂದಲು ಪಣ ತೊಟ್ಟಿದ್ದಾರೆ. ಇದಕ್ಕಾಗಿ ಪ್ರತಿ ವರ್ಷಕ್ಕೆ ಎರಡು ಮಿಲಿಯನ್ ಡಾಲರ್ ವೆಚ್ಚ ಮಾಡುತ್ತಿದ್ದಾರೆ. ಅಂದರೆ ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಹೇಳುವುದಾದರೆ ಅಂದಾಜು 16 ಕೋಟಿಗೂ ಅಧಿಕ ಹಣವನ್ನು ತಮ್ಮ ದೇಹಕ್ಕಾಗಿ ವ್ಯಯಿಸುತ್ತಿದ್ದಾರೆ.