ಜಿನೀವಾ: ಸುಡಾನ್‌ನ ಮಿಲಿಟರಿ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಇದುವರೆಗೆ 413 ಮಂದಿ ಮೃತಪಟ್ಟಿದ್ದಾರೆ. 3,551 ಜನ ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಅಷ್ಟೇ ಅಲ್ಲದೆ, ಮಕ್ಕಳನ್ನು ಸಹ ಬಲಿ ಪಡೆಯಲಾಗುತ್ತಿದ್ದು, ಇದುವರೆಗೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಟರ್ಕಿಶ್ ನ್ಯೂಸ್ ಏಜೆನ್ಸಿಯೊಂದು ವರದಿ ಮಾಡಿದೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಬ್ಲ್ಯೂಹೆಚ್ಒ ವಕ್ತಾರ ಮಾರ್ಗರೆಟ್ ಹ್ಯಾರಿಸ್, "ಸುಡಾನ್ ಸರ್ಕಾರ ನೀಡಿದ ಅಂಕಿ-ಅಂಶಗಳ ಪ್ರಕಾರ, ಸಂಘರ್ಷದಲ್ಲಿ ಈವರೆಗೆ 413 ಜನರು ಮೃತಪಟ್ಟಿದ್ದು 3,551 ಜನರು ಗಾಯಗೊಂಡಿದ್ದಾರೆ. ಈ ಹೋರಾಟವು ದೇಶದ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ನಡೆಯುತ್ತಿರುವ ಘರ್ಷಣೆಯ ಭಾಗವಾಗಿದೆ. ಏಪ್ರಿಲ್ 15 ರಿಂದ ಆರೋಗ್ಯ ಸೌಲಭ್ಯಗಳ ಮೇಲೆ 11 ಬಾರಿ ದಾಳಿ ಮಾಡಲಾಗಿದೆ. ಪರಿಣಾಮ ಜನರಿಗೆ ತುರ್ತು ಆರೋಗ್ಯ ಸೌಲಭ್ಯಗಳು ದೊರಕುತ್ತಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ, ತುರ್ತು ಔಷಧಿಗಳು ಕೂಡ ನಾಗರಿಕರಿಗೆ ಸಿಗದ ಪರಿಸ್ಥಿತಿ ಉಂಟಾಗಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ :ಸುಡಾನ್ ಸೇನಾ ಸಂಘರ್ಷ.. ಸಂಕಷ್ಟದಲ್ಲಿ 31 ಕನ್ನಡಿಗರು, ನೆರವಿಗೆ ಮನವಿ
"ಸುಡಾನ್‌ನ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 20 ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಾಗಿದೆ. ಜೊತೆಗೆ, ಈ ಭಾಗದಲ್ಲಿ 12ಕ್ಕೂ ಹೆಚ್ಚು ಆಸ್ಪತ್ರೆಗಳು ಮುಚ್ಚಿವೆ. ಪರಿಣಾಮ ಸಂಘರ್ಷದಲ್ಲಿ ಗಾಯಗೊಂಡ ಜನರು ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ" ಎಂದಿದ್ದಾರೆ.