ಜಿನೀವಾ : ಸುಡಾನ್ನಲ್ಲಿ ನಾಲ್ಕು ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷವು ಭಾರಿ ಮಾನವೀಯ ವಿಪತ್ತುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆ(ಯುಎನ್) ಎಚ್ಚರಿಸಿದೆ. ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ವಿಭಾಗದ (ಯುಎನ್ಎಚ್ಸಿಆರ್) ವಕ್ತಾರ ವಿಲಿಯಂ ಸ್ಪಿಂಡ್ಲರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ನಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ 4.3 ದಶಲಕ್ಷಕ್ಕೂ ಹೆಚ್ಚು ಜನರು ದೇಶ ತೊರೆದಿದ್ದಾರೆ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ವಕ್ತಾರೆ ಮಾರ್ಗರೇಟ್ ಹ್ಯಾರಿಸ್ ಮಾತನಾಡಿ, ಯುದ್ಧವು ಜನರ ಜೀವನ, ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿದೆ ಎಂದು ಹೇಳಿದರು. "ಹೆಚ್ಚಿನ ಯುದ್ಧ ಪೀಡಿತ ಪ್ರದೇಶಗಳಲ್ಲಿ ಸುಮಾರು 67 ಪ್ರತಿಶತದಷ್ಟು ಆಸ್ಪತ್ರೆಗಳು ಮುಚ್ಚಲ್ಪಟ್ಟಿವೆ. ನಾಲ್ಕು ತಿಂಗಳಲ್ಲಿ ಆಸ್ಪತ್ರೆಗಳ ಮೇಲೆ 53 ಬಾರಿ ದಾಳಿಗಳಾಗಿದ್ದು, ಈ ದಾಳಿಗಳಿಂದ 11 ಜನ ಸಾವಿಗೀಡಾಗಿದ್ದಾರೆ ಮತ್ತು 38 ಜನ ಗಾಯಗೊಂಡಿದ್ದಾರೆ" ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ (ಒಎಚ್ಸಿಎಚ್ಆರ್) ವಕ್ತಾರೆ ಎಲಿಜಬೆತ್ ಥ್ರೋಸೆಲ್ ಮಾತನಾಡಿ, ಸಾವು ನೋವುಗಳ ನಿಖರ ಸಂಖ್ಯೆಯನ್ನು ಅಂದಾಜಿಸುವುದು ಸದ್ಯಕ್ಕೆ ಕಷ್ಟಕರವಾಗಿದೆ. ಆದಾಗ್ಯೂ ತಾತ್ಕಾಲಿಕ ಅಂಕಿ- ಅಂಶಗಳ ಪ್ರಕಾರ ಇಲ್ಲಿಯವರೆಗೆ ನೂರಾರು ನಾಗರಿಕರು ಸೇರಿದಂತೆ 4,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಸಂಘರ್ಷದಲ್ಲಿ ನಿರತವಾಗಿರುವ ಎಲ್ಲ ಗುಂಪುಗಳು ತಕ್ಷಣವೇ ಹೋರಾಟ ನಿಲ್ಲಿಸಬೇಕು ಮತ್ತು ರಾಜಕೀಯ ಮಾತುಕತೆಗಳನ್ನು ಪುನಾರಂಭಿಸಬೇಕು. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿ ತಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಬೇಕು, ನಾಗರಿಕರನ್ನು ಮಿಲಿಟರಿ ಚಟುವಟಿಕೆಗಳಿಂದ ರಕ್ಷಿಸಬೇಕು ಮತ್ತು ತುರ್ತು ಸೇವೆಗಳು ಅಡೆತಡೆಯಿಲ್ಲದೇ ಸಿಗುವಂತೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಯುಎನ್ ಜನಸಂಖ್ಯಾ ನಿಧಿಯ (ಯುಎನ್ಎಫ್ಪಿಎ) ಅರಬ್ ವಲಯದ ಪ್ರಾದೇಶಿಕ ನಿರ್ದೇಶಕಿ ಲೈಲಾ ಬೇಕರ್ ಮಾತನಾಡಿ, ಸಂಘರ್ಷ ಮುಂದುವರೆದಂತೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ತುರ್ತು ಮಾನವೀಯ ನೆರವು ಅಗತ್ಯವಿರುವ ಲಕ್ಷಾಂತರ ಜನರನ್ನು ತಲುಪುವುದು ತೀರಾ ಕಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 2.6 ದಶಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಬಾಲಕಿಯರಿಗೆ ಮಾನವೀಯ ಸಹಾಯದ ಅಗತ್ಯವಿದೆ. ಇದರಲ್ಲಿ ಸುಮಾರು 2,60,000 ಜನರು ಪ್ರಸ್ತುತ ಗರ್ಭಿಣಿಯಾಗಿದ್ದಾರೆ ಮತ್ತು ಸುಮಾರು 1,00,000 ಜನ ಮುಂದಿನ ಮೂರು ತಿಂಗಳಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ ಎಂದು ಬೇಕರ್ ಸುದ್ದಿಗಾರರಿಗೆ ತಿಳಿಸಿದರು.
"ತುರ್ತು ಆರೋಗ್ಯ ಸೇವೆಗಳು ಸಿಗದೆ ಗರ್ಭಿಣಿಯರು ಮತ್ತು ಅವರ ಮಕ್ಕಳ ಜೀವ ತೀವ್ರ ಅಪಾಯದಲ್ಲಿದೆ" ಎಂದು ಅವರು ಹೇಳಿದರು. ಸುಡಾನ್ನಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ಉಪ ಪ್ರತಿನಿಧಿ ಆಡಮ್ ಯಾವೊ ಮಾತನಾಡಿ, ಸುಡಾನ್ನಲ್ಲಿ ಆಹಾರ ಲಭ್ಯತೆಯ ಸ್ಥಿತಿ ಹದಗೆಟ್ಟಿದೆ. ಸುಮಾರು 20.3 ಮಿಲಿಯನ್ ಜನ ಅಥವಾ ಜನಸಂಖ್ಯೆಯ 42 ಪ್ರತಿಶತಕ್ಕೂ ಹೆಚ್ಚು ಜನ ತೀವ್ರ ಆಹಾರ ಕ್ಷಾಮವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ :Gwadar: ಚೀನಾ ಎಂಜಿನಿಯರುಗಳ ಮೇಲೆ ಗ್ವಾದಾರ್‌ನಲ್ಲಿ ಆತ್ಮಹತ್ಯಾ ದಾಳಿ; ಬಲೂಚ್ ಲಿಬರೇಶನ್ ಆರ್ಮಿ ಹೊಣೆ