ಹ್ಯಾಂಪ್ಟನ್ (ಅಮೆರಿಕ): ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಸಾಮಾನ್ಯ ಎಂಬಂತೆ ನಡೆಯುತ್ತಿವೆ. ಇದೀಗ, ಹ್ಯಾಂಪ್ಟನ್‌ನಲ್ಲಿ ದುಷ್ಕರ್ಮಿಗಳು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಅಟ್ಲಾಂಟಾದ ದಕ್ಷಿಣಕ್ಕಿರುವ ಸುಮಾರು 8,500 ಜನರು ವಾಸವಿರುವ ಹ್ಯಾಂಪ್ಟನ್‌ನ ಉಪವಿಭಾಗದಲ್ಲಿ ಶನಿವಾರ ಬೆಳಿಗ್ಗೆ ಶೂಟೌಟ್ ನಡೆದಿದೆ. ದಾಳಿ ನಡೆಸಿದ ಶಂಕಿತ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಆರೋಪಿಯ ಬಂಧನಕ್ಕಾಗಿ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದೆ.
ನೈಜೀರಿಯಾದಲ್ಲಿ ನಡೆದಿದ್ದ ಗುಂಡಿನ ದಾಳಿ :ಜುಲೈ 8ರಂದು ನೈಜೀರಿಯಾದ ಬೆನ್ಯೂ ರಾಜ್ಯದ ಗ್ರಾಮವೊಂದಕ್ಕೆ ನುಗ್ಗಿದ ಬಂದೂಕುಧಾರಿಗಳು 24 ಗ್ರಾಮಸ್ಥರನ್ನು ಅಮಾನುಷವಾಗಿ ಹತ್ಯೆಗೈದಿದ್ದರು. ಉಕುಮ್ ಜಿಲ್ಲೆಯ ಅಕ್ಪುನಾ ಗ್ರಾಮದ ಜನರ ಮೇಲೆ ಎರಡು ಗಂಟೆಗೂ ಹೆಚ್ಚು ಕಾಲ ಮನಬಂದಂತೆ ಗುಂಡು ಹಾರಿಸಿದ್ದರು. ವಿವಿಧ ಗಲಭೆ ಪ್ರಕರಣಗಳಿಂದ ದೇಶದಲ್ಲಿ ಈ ವರ್ಷ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಕಾರ್ ರೇಸಿಂಗ್ ಮೇಲೆ ಗುಂಡಿನ ದಾಳಿ :ಮೆಕ್ಸಿಕೋದಲ್ಲಿ ಕಾರ್ ರೇಸಿಂಗ್ ವೇಳೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 10 ಮಂದಿ ರೇಸರ್ಗಳು ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿದ್ದರು. ಮೇ 20, 2023ರಂದು ಉತ್ತರ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಕಾರ್ ರೇಸಿಂಗ್ ನಡೆಯುತ್ತಿತ್ತು. ವ್ಯಾನ್ವೊಂದರಲ್ಲಿ ಬಂದ ಬಂದೂಕುಧಾರಿಗಳು ಕಾರ್ ರೇಸ್ನಲ್ಲಿ ಭಾಗವಹಿಸಿದವರ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದರು. ಇದರಿಂದ ಕನಿಷ್ಠ 10 ಮಂದಿ ರೇಸರ್ಗಳು ಪ್ರಾಣ ಕಳೆದುಕೊಂಡಿದ್ದರು. 9 ಮಂದಿಗೆ ತೀವ್ರ ಗಾಯಗಳಾಗಿತ್ತು ಎಂದು ಬಾಜಾ ಕ್ಯಾಲಿಫೋರ್ನಿಯಾ ಸ್ಟೇಟ್ ಅಟಾರ್ನಿ ಜನರಲ್ ಕಚೇರಿ ತಿಳಿಸಿತ್ತು.